ನಾಪೋಕ್ಲು, ಡಿ. 15: ಪ್ರಮುಖ ಪವಿತ್ರ ಧಾರ್ಮಿಕ ಪುಣ್ಯಕ್ಷೇತ್ರ ಎಮ್ಮೆಮಾಡು ಗ್ರಾಮದ ದರ್ಗಾಕ್ಕೆ ತೆರಳುವ ರಸ್ತೆ ಕಾಮಗಾರಿಯು ಸ್ಥಗಿತಗೊಂಡಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸದಿದ್ದಲ್ಲಿ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಮುಖ್ಯ ರಸ್ತೆಯಿಂದ ದರ್ಗಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಿಸ್ತರಣೆ ಮಾಡಲಾಗಿದ್ದು ಅಭಿವೃದ್ಧಿ ಕಾರ್ಯ ಆರಂಭಿಸಲಾಗಿ ಅರ್ಧಕ್ಕೆ ಕೈಬಿಡಲಾಗಿದೆ. ರೂ. 1.5 ಕೋಟಿ ವೆಚ್ಚದಲ್ಲಿ ಹಾಗೂ ರೂ. 20 ಲಕ್ಷ ಇತರ ಅನುದಾನದಲ್ಲಿ ಆರಂಭಿಸ ಲಾದ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳು ಕಳೆದಿದ್ದು ರಸ್ತೆ ದುಸ್ಥಿತಿಗೆ ತಲುಪಿದೆ. ಪ್ರತಿನಿತ್ಯ ನೂರಾರು ಜನ ಸಂಚರಿಸುವ ಹಾಗೂ ಭಕ್ತಾದಿಗಳು ಬಂದು ಹೋಗುವ ರಸ್ತೆ ದುಸ್ಥಿತಿಯಿಂದ ಕೂಡಿರುವುದರಿಂದ ಕೂಡಲೇ ಕಾಮಗಾರಿ ಆರಂಭಿಸಬೇಕು. ತಪ್ಪಿದ್ದಲ್ಲಿ ಗ್ರಾಮಸ್ಥರು ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಎಮ್ಮೆಮಾಡು ಗ್ರಾಮದ ಪ್ರಮುಖರು ತಿಳಿಸಿದ್ದಾರೆ. ಶಾಸಕರ ವಿಶೇಷ ಮುತುವರ್ಜಿಯಿಂದ ರಸ್ತೆ ಕಾಮಗಾರಿ ಆರಂಭಗೊಂಡಿತ್ತು. ಬಳಿಕ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಅರ್ಧದಲ್ಲಿಯೇ ನಿಂತಿದೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಸ್ಪಂದನ ದೊರೆತಿಲ್ಲ. ಕಾಮಗಾರಿ ಆರಂಭಿಸ ದಿದ್ದಲ್ಲಿ ಚುನಾವಣೆ ಬಹಿಷ್ಕರಿಸಲಿದ್ದು ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಮಾಜಿ ಪಂಚಾಯಿತಿ ಸದಸ್ಯ ಹಾಲಿ ಅಭ್ಯರ್ಥಿಗಳಾದ ಚಂಬಾರಂಡ ಮಾಹಿನೆ, ಸಿ.ಎ. ಇಸ್ಮಾಯಿಲ್, ಮುಸ್ತಫಾ, ಸಯ್ಯದ್ ಹಾಜಿ, ಚಂಬಾರಂಡ ಉಮ್ಮರ್, ಜಿಲ್ಲಾ ಬಿ.ಜೆ.ಪಿ. ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಸಿ.ಎಂ. ರಫೀಕ್ ಮತ್ತು ಜಮಾಅತ್ ಅಧ್ಯಕ್ಷರಾದ ಕೆ.ಎಸ್. ಅಬ್ದುಲ್ ಖಾದರ್ ಹಾಜಿ, ಜಮಾಅತ್ ಕಾರ್ಯದರ್ಶಿ ಇಬ್ರಾಹಿಂ ಸಅದಿ, ಜಮಾಅತ್ ಉಪಾಧ್ಯಕ್ಷ ಸಿ.ಎಂ. ಖಾದರ್, ಗ್ರಾಮಸ್ಥರು ಇದ್ದರು.