ವೀರಾಜಪೇಟೆ ವರದಿ, ಡಿ. 15: ವೀರಾಜಪೇಟೆ ತಾಲೂಕಿನ ಬೇತ್ರಿ ಸನಿಹದ ಶ್ರೀ ಕಾಕೋಟುಪರಂಬು ಕಾಲಭೈರವ ದೇವರ ಉತ್ಸವ ಸಂಪನ್ನ ಗೊಂಡಿತು. ಸಂಪ್ರದಾಯದಂತೆ ಧಾರ್ಮಿಕ ಕ್ರಿಯೆಯೊಂದಿಗೆ ಅಪರಾಹ್ನದ ನಂತರ ಬೇತ್ರಿಯ ಕಾವೇರಿ ಹೊಳೆಗೆ ದೇವರ ಅವಭೃತ ಸ್ಥಾನಕೆ ತೆರಳುವುದರೊಂದಿಗೆ ಕಾಲಭೈರವ ದೇವರ ಹಬ್ಬ, ಕೊರೊನಾ ಸಂಕಷ್ಟದ ನಡುವೆ ಅಷ್ಟೆನೂ ಸಂಭ್ರಮಗಳಿಲ್ಲದೆ ಈ ಬಾರಿ ಮುಕ್ತಾಯವಾಯಿತು.
ತಾ. 14ರ ಸಂಜೆ ಮಂದನ ಮೂರ್ತಿ ಕೋಲ ಹಾಗೂ ಮಂದಕನ ಹಾಡುವ ಸಂಪ್ರದಾಯ ನಡೆಯಿತು.
ಇಂದು ಅಪರಾಹ್ನ ಅಯಿಮೆ ಯಂತೆ ಕಾಕೋಟುಪರಂಬು-ನಾಲ್ಕೇರಿ ತೋಣೂರ್ ಅಮ್ಮಂಡಿರ ತಕ್ಕರ ಮನೆಯಿಂದ ಭಂಡಾರ, ಪೇಮಾಡ್ ನಿಂದ ಕುದುರೆ, ಪಾಂಡ್ಮಾಡ್‍ನಿಂದ ಚೌರಿ ಮತ್ತು ಮೂಗೂರುನಿಂದ ಕೊಡೆಯನ್ನು ಆಯಾ ಊರಿನ ಮುಖ್ಯಸ್ಥರು ಊರಿನವರು ದೇವಾಲಯಕೆ ತರುವುದರೊಂದಿಗೆ ವಿದ್ಯುಕ್ತವಾಗಿ ಹಬ್ಬಕೆ ಚಾಲನೆ ದೊರೆಯಿತು.
ಅರ್ಚಕ ವೃಂದದಿಂದ ಪೂಜಾ ಕೈಂಕರ್ಯಗಳು ನಡೆದವು. ಊರಿ ನವರ ದುಡಿ ಕೊಟ್ ಪಾಟ್, ಬೊಳಕಾಟ್ ಪ್ರದರ್ಶನ, ದೇವರ ಉತ್ಸವ ಮೂರ್ತಿಯ ಪ್ರದಕ್ಷಿಣೆ ದೇವಾಲಯದ ಅವರಣದಲ್ಲಿ ನಡೆಯಿತು.
ಸಂಪ್ರದಾಯದಂತೆ ವಿಶಾಲ ಮೈದಾನದಲ್ಲಿ ಇರುವ ಅರಳಿ ಮರದ ಸುತ್ತು ದೇವರ ಕುಣಿತಕ್ಕಾಗಿ ಬರುವ ಕಾಲಭೈರವ ಉತ್ಸವ ಮೂರ್ತಿಯನ್ನು ಕಂಡು ದೂರದಲ್ಲಿ ಇರುವ ಚೌಂಡಿ ಕೋಲವು ಕೈಯಲ್ಲಿ ಕತ್ತಿ ಹಿಡಿದು ಧಾವಿಸಿ ಬರುವ ದೃಶ್ಯ ರೋಮಾಂಚಕಾರಿಯಾಗಿತ್ತು.
ಶ್ರೀ ಕಾಲಭೈರವ ದೇವ ತಕ್ಕರಾಗಿ ಅಮ್ಮಂಡಿರ ಕುಟುಂಬ ಕಾರ್ಯ ನಿರ್ವಹಿಸುತ್ತಿವೆ. ಹುತ್ತರಿ ನಂತರ ಕಟಾವು ಮಾಡಿದ ಭತ್ತವನ್ನು ಅಕ್ಕಿಮಾಡಿ ಮಂದಕನ ಹಾಡುವ ದಿನ (ಡಿ.14) ‘ಪುದಿಯಕ್ಕಿ’ ಊಟಮಾಡು ವುದು ರೂಢಿಯಲ್ಲಿ ಇದೆ.
ಈ ಹಬ್ಬವು ತಂದು ಬೆಂದು (ವಧು-ವರ ಅನ್ವೇಷಣೆ)ಗೆ ಒಂದು ವೇದಿಕೆ ಅಗಿರುವುದು ಕೂಡ ವಿಶೇಷ.
ದೇವರ ಕಟ್ಟು ಹಾಕಿದ ದಿನದಿಂದ ಕಾಕೋಟುಪರಂಬುವಿನ ವಿಶಾಲ ಮೈದಾನದ ದಿಬ್ಬದ ಮೇಲಿರುವ ಆಯಾಕಟ್ಟಿನ ಸ್ಥಳದಲ್ಲಿ ರಾತ್ರಿ ಕೆರೆಯಲ್ಲಿ ಸ್ಥಾನಮಾಡಿ ಬಿಳಿಯ ಕುಪ್ಪಸ ತೊಟ್ಟ ಒಬ್ಬರು (ಈ ವರ್ಷ ಮಂಡೆಪಂಡ) ಪ್ರತಿನಿತ್ಯ ‘ಪೀಲಿಆಟ್’ (ನವಿಲು ಗರಿ ಹಿಡಿದು) ಕುಣಿಯುತ್ತಾರೆ ಹಾಗೂ ಊರಿನವರು ಅವರ ಹಿಂದೆ ಮೇದ ಪರೆ ವಾದ್ಯಕ್ಕೆ ತಕ್ಕಂತೆ ಭಾಗವಹಿಸುತ್ತಾರೆ. ಅದು ಊರಿನ ಕಟ್ಟು ಪಾಡು. ಒಟ್ಟು 14 ದಿನ ಪೀಲಿಯಾಟ್ ನಡೆಯುತ್ತದೆ.