*ಗೋಣಿಕೊಪ್ಪಲು, ಡಿ. 16: ಕಾಫಿ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಲ್ಲಿ ಅಧಿಕ ಇಳುವರಿಯೊಂದಿಗೆ ಹೆಚ್ಚು ಲಾಭಾಂಶ ಹೊಂದಬಹುದು. ಈ ನಿಟ್ಟಿನಲ್ಲಿ ಕೃಷಿಕರ ಪ್ರಯತ್ನ ಅಗತ್ಯ ಎಂದು ಗೋಣಿಕೊಪ್ಪಲು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಡಾ.ವಿ.ಚಂದ್ರಶೇಖರ್ ಸಲಹೆ ನೀಡಿದ್ದಾರೆ.

ವೀರಾಜಪೇಟೆ ತಾಲೂಕು ಕುಂದ- ಈಚೂರು ಶ್ರೀ ದಬ್ಬೆಚಮ್ಮ ಜನ ಸಾಮಾನ್ಯರ ಸೇವಾ ಸಂಘ ಆಶ್ರಯದಲ್ಲಿ, ಅಧ್ಯಕ್ಷ ಪಿ.ಜಿ.ಬೋಸ್ ಅಧ್ಯಕ್ಷತೆಯಲ್ಲಿ ಅಲ್ಲಿನ ಕೈಮುಡಿಕೆ ಕೋಲ್‍ಬಾಣೆಯಲ್ಲಿ ಜರುಗಿದ ಕಾಫಿ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸರಾಸರಿ ವಾರ್ಷಿಕ ಕಾಫಿ ಉತ್ಪಾದನೆಗೆ 60 ಇಂಚು ಮಳೆ ಸಾಕಾಗುತ್ತದೆ. ಸಾಧಾರಣವಾಗಿ ನೀರು, ನೆರಳು, ಹವಾಗುಣದ ವ್ಯತ್ಯಾಸವೂ ಕಾಫಿ ವಾರ್ಷಿಕ ಫಸಲಿನ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಮರದ ನೆರಳಿನಲ್ಲಿ ಕಾಫಿ ಬೆಳೆಯುವದರಿಂದ ಮರಗಿಡಗಳ ಎಲೆಗಳೂ ಕಾಫಿ ಗಿಡಕ್ಕೆ ನಿಸರ್ಗದತ್ತ ಸಾವಯವ ಗೊಬ್ಬರ ಒದಗಿಸುತ್ತದೆ. ಈ ಹಂತದಲ್ಲಿ ಕಾಫಿ ತೋಟದ ಮಣ್ಣಿನ ಪರೀಕ್ಷೆ ಮಾಡಿ, ಪೂರಕ ಗೊಬ್ಬರ ಬಳಕೆ ಮಾಡಿದ್ದಲ್ಲಿ ಅಧಿಕ ಇಳುವರಿ ತೆಗೆಯಬಹುದು ಎಂದು ಸಲಹೆ ನೀಡಿದರು. ಕಾಫಿ ಕೊಯ್ಲಿನ ನಂತರ 15-20 ದಿನ ಕಾಫಿ ಗಿಡಗಳಿಗೆ ವಿರಾಮ ನೀಡಬೇಕು. ನಂತರ ತುಂತುರು ನೀರಾವರಿ ಬೇಸಿಗೆಯಲ್ಲಿ ಮಾಡುವದು ಉತ್ತಮ. ಇಲ್ಲವೆ, ಕಾಫಿ ಹೂ ಬಿಡುವ ಸಂದರ್ಭ ಗಿಡಕ್ಕೆ ಒತ್ತಡ ಹೆಚ್ಚಾಗುವ ಹಿನ್ನೆಲೆ ಇಳುವರಿ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಿದರು.

ಕಾಫಿ ದರ ಕುಸಿತ, ದುಬಾರಿ ತೋಟ ನಿರ್ವಹಣಾ ವೆಚ್ಚಗಳಿಂದ ಪಾರಾಗಲು ಕಾಳುಮೆಣಸು,ಅಡಿಕೆ, ಕಿತ್ತಳೆ ಇತ್ಯಾದಿ ಪರ್ಯಾಯ ಬೆಳೆ ಪದ್ಧತಿಯನ್ನು ಇಂದಿನ ಹವಾಗುಣ ವೈಪರೀತ್ಯದ ನಡುವೆ ಅಳವಡಿಸಿಕೊಳ್ಳುವದು ಸೂಕ್ತ. 1990ರ ದಶಕದಲ್ಲಿ ಕಾಫಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಯಾದ ಸಂದರ್ಭ ಉತ್ತಮ ಬೆಲೆ ಸಿಗುತ್ತಿತ್ತು. ಇದೀಗ ಕಾಫಿ ಕೃಷಿಕರು ದರಕುಸಿತದಿಂದ ಬೇಸತ್ತಿದ್ದಾರೆ. ಭಾರತದಲ್ಲಿ ಕಾಫಿ ಆಂತರಿಕ ಬಳಕೆ ಕಡಿಮೆ ಇರುವದೂ ದರ ಕುಸಿತಕ್ಕೆ ಕಾರಣವಾಗಿದೆ. ಕಾಫಿಯನ್ನು ಮಣ್ಣು ನೆಲದಲ್ಲಿ ಒಣಗಿಸಿದ್ದಲ್ಲಿ ಗುಣಮಟ್ಟ ಕುಸಿಯುತ್ತದೆ. ಸಿಮೆಂಟ್ ಕಾಫಿ ಕಣದಲ್ಲಿ ಒಣಗಿಸುವದು ಮತ್ತು ತೇವಾಂಶ ಅಧಿಕವಾಗದಂತೆ ಗೋದಾಮಿನಲ್ಲಿ ದಾಸ್ತಾನಿಡುವದೂ ಅಗತ್ಯ. ಕಾಫಿ ಕೃಷಿಕರಿಗೆ ಕಾಫಿ ಕಣ, ಇತ್ಯಾದಿ ಕೃಷಿ ಉಪಕರಣ ಸಬ್ಸಿಡಿ ದರದಲ್ಲಿ ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವಾಲಯದ ಗಮನ ಸೆಳೆಯಲಾಗಿದ್ದು, ಮುಂದಿನ ವರ್ಷದಿಂದ ಕಾಫಿ ಕೃಷಿಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವ ಆಶಾಭಾವನೆ ಇದೆ ಎಂದರು.

ಇಂಡಿಯಾ ಕಾಫಿ ಟ್ರಸ್ಟ್‍ನ ಪರವಾಗಿ ವಿಶ್ವ ಕಾಫಿ ಸಮಾವೇಶದ ಪ್ರಚಾರ ವಿಭಾಗದ ಕಾರ್ಯಕ್ರಮ ಸಂಯೋಜಕ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ಪ್ರಸ್ತುತ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಬೇಕಿದ್ದ ವಿಶ್ವ ಕಾಫಿ ಸಮ್ಮೇಳನ ಕೋವಿಡ್-19 ಹಿನ್ನೆಲೆ ಮುಂದೂಡಲ್ಪಟ್ಟಿದೆ. ಜಾಗತಿಕ ಕಾಫಿ ಮಾರುಕಟ್ಟೆಯ ಖರೀದಿದಾರ ರಾಷ್ಟ್ರಗಳು ಹಾಗೂ ಉತ್ಪಾದಕ ರಾಷ್ಟ್ರಗಳು ಮುಂದೆ ಭಾರತಕ್ಕೆ ಬರಲಿದ್ದು, ಸಣ್ಣ ಕಾಫಿ ಬೆಳೆಗಾರರಿಗೂ ತಾವು ಬೆಳೆದ ಕಾಫಿಯನ್ನು ವಿಶ್ವ ಕಾಫಿ ಉದ್ಯಮಿಗಳಿಗೆ ಪರಿಚಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೆ.ಕೆ.ಅಯ್ಯಪ್ಪ, ಕಾರ್ಯದರ್ಶಿ ಎನ್.ಎಸ್.ಪೆಮ್ಮಯ್ಯ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಕೆ.ಎನ್.ರಾಣಿ ಪ್ರಾರ್ಥಿಸಿದರು.