ಮಡಿಕೇರಿ, ಡಿ. 16: ಇಂದಿನ ವೈಜ್ಞಾನಿಕ ಯುಗದಲ್ಲಿ ನವ ಸಮಾಜದ ಅಭ್ಯುದಯ ಹಾಗೂ ನಿರ್ಮಾಣಕ್ಕೆ ಶಿಕ್ಷಣ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಭವಿಷ್ಯಕ್ಕೆ ತಕ್ಕಂತೆ ಶಿಕ್ಷಣವನ್ನು ಪಡೆದುಕೊಳ್ಳುವಂತಾಗಬೇಕು ಎಂದು ಕೊಡಗು ಜಿಲ್ಲಾ ಅಂಚೆ ಇಲಾಖೆಯ ಅಧೀಕ್ಷಕ ಉಮ್ಮಣಕುಟ್ಟಡ ಸೋಮಯ್ಯ ಹೇಳಿದರು.
ಕೊಡಗು ಕೆಂಬಟ್ಟಿ ಅಭಿವೃದ್ಧಿ ಸಮಾಜದ ವತಿಯಿಂದ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಜನಾಂಗದ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ವೀರಾಜಪೇಟೆಯ ಉಡುಪಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಸೋಮಯ್ಯ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕಿ ಡಾ. ಬೊಡುಕುಟ್ಟಡ ರಾಧಿಕ ಮಾತನಾಡಿ, ಶಿಕ್ಷಣ ಎನ್ನುವುದು ಮಾನವನ ಬುದ್ಧಿ ಮತ್ತು ಮನಸ್ಸಿಗೆ ಸಿಗುವ ಸಂಸ್ಕಾರವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ದೊಡ್ಡಕುಟ್ಟಡ ರಾಮು ಅಯ್ಯಪ್ಪ, ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಧಾರದಿಂದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಸಮುದಾಯದವರೆಲ್ಲರೂ ಉನ್ನತ ಶಿಕ್ಷಣ ಮತ್ತು ಗುಣಮಟ್ಟದ ಬದುಕನ್ನು ಪಡೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು.
ಸಮಾಜದ ಉಪಾಧ್ಯಕ್ಷ ಮೊಟ್ಟಕುಟ್ಟಡ ಬೋಜಮ್ಮಮುತ್ತಣ್ಣ ಉಪಸ್ಥಿತರಿದ್ದರು. ಬಣ್ಣಕುಟ್ಟಡ ಅನುಪಮ, ಕಾವೇರಮ್ಮ, ಪೊನ್ನಮ್ಮ ಪ್ರಾರ್ಥಿಸಿದರು. ಸಮಾಜದ ಕಾರ್ಯದರ್ಶಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ ನಿರೂಪಿಸಿ, ವಂದಿಸಿದರು.