ಮಡಿಕೇರಿ, ಡಿ. 16: ರಾಜಕೀಯವಾಗಿ ಕೊಡಗು ಜಿಲ್ಲೆ ರಾಜ್ಯದ ಇತರೆಡೆಗಳಿಗಿಂತ ತುಸು ವಿಭಿನ್ನವಾಗಿದ್ದ ಸನ್ನಿವೇಶ ಇದೀಗ ಒಂದು ರೀತಿಯಲ್ಲಿ ಇತಿಹಾಸದಂತಾಗುತ್ತಿದೆ. ಕೊಡಗಿನಲ್ಲಿ ಈ ಹಿಂದೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಜಿಲ್ಲೆಯ ಹಿರಿಮೆಯನ್ನು ತಮ್ಮದೇ ಧಾಟಿಯಲ್ಲಿ ಎತ್ತಿಹಿಡಿದಿದ್ದರು. ಪ್ರಸ್ತುತದ ಸನ್ನಿವೇಶದಲ್ಲಿ ರಾಜಕೀಯದಲ್ಲಿ ಏನೂ ಆಗಬಹುದು ಎಂಬ ಮಾತನ್ನು ಜಿಲ್ಲೆಯೂ ಕಾಣುತ್ತಿದೆ. ಪಕ್ಷ ತೊರೆಯುವ ಮೂಲಕ ಬೆಂಬಲಿಗರ ಸಹಿತವಾಗಿ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದು... ಅಲ್ಲಿ ಒಂದಷ್ಟು ಕಾಲ ಇದ್ದು ಮತ್ತೆ ಆ ಪಕ್ಷದತ್ತ ಮುನಿಸಿಕೊಂಡೋ ಅಥವಾ ತಾವು ತಪ್ಪು ಹೆಜ್ಜೆ ಹಾಕಿದ್ದೇವೆ ಎಂಬ ಹತಾಶ ಮನೋಭಾವನೆಯಿಂದಲೋ ಎಂಬಂತೆ ಮತ್ತೆ ಮಾತೃಪಕ್ಷದತ್ತ ವಾಲುವ ಬೆಳವಣಿಗೆ ಜಿಲ್ಲೆಯಲ್ಲಿಯೂ ಸಾಮಾನ್ಯವಾಗುತ್ತಿದೆ.
ಕೊಡಗಿನ ರಾಜಕೀಯವನ್ನು ಇತ್ತೀಚಿನ ಕೆಲವು ವರ್ಷಗಳಿಂದ ವಿಮರ್ಶೆ ಮಾಡಿದಾಗ ಕೆಲವು ಪ್ರಮುಖ ನಾಯಕರ ಈ ರೀತಿಯ ಹೆಜ್ಜೆಗಳು ಕಂಡುಬರುತ್ತಿವೆ. ಇದಕ್ಕೆ ಈಗಿನ ತಾಜಾ ಉದಾಹರಣೆ ಮಾಜಿ ಸಚಿವರಾದ ಬಿ.ಎ. ಜೀವಿಜಯ ಅವರ ನಡೆಯಾಗಿದೆ.
ಬಿ.ಎ. ಜೀವಿಜಯ ಅವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೊಡಗಿನವರೇ ಆದ ಗುಂಡೂರಾವ್ ಅವರನ್ನು ಸೋಲಿಸಿದ್ದವರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರ ವಿರುದ್ಧ ನಂತರದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಜೀವಿಜಯ ಅವರು ಅಚ್ಚರಿಯ ಫಲಿತಾಂಶ ತಂದಿದ್ದರು. ನಂತರದಲ್ಲಿ ರಾಮಕೃಷ್ಣ ಹೆಗಡೆ ಅವರ ಸರಕಾರದಲ್ಲಿ ರಾಜ್ಯದ ಅರಣ್ಯ ಸಚಿವರೂ ಆಗಿದ್ದರು. ಬಳಿಕ ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಶಾಸಕರೂ ಆಗಿದ್ದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ತೊರೆದು ಜೆ.ಡಿ.ಎಸ್. ಪಕ್ಷ ಸೇರ್ಪಡೆಗೊಂಡು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಬಿ.ಜೆ.ಪಿ.ಯ ಅಪ್ಪಚ್ಚು ರಂಜನ್ ಅವರ ಎದುರು ಇತ್ತೀಚಿನ ಸತತ ಎರಡು ಚುನಾವಣೆಯಲ್ಲಿ ಸೋಲು ಕಂಡಿದ್ದು (ಒಮ್ಮೆ ಕಾಂಗ್ರೆಸ್ ಹಾಗೂ ಮತ್ತೊಮ್ಮೆ ಜೆ.ಡಿ.ಎಸ್.) ಇತಿಹಾಸವಾಗಿದೆ.
ಇನ್ನು ಜನತಾದಳದ ಮತ್ತೋರ್ವ ಪ್ರಮುಖ ಧುರೀಣರಾದ ಯಂ.ಸಿ. ನಾಣಯ್ಯ ಅವರು ಕಳೆದ ಚುನಾವಣೆಯ ಸಂದರ್ಭ ಜೆ.ಡಿ.ಎಸ್. ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ವೀರಾಜಪೇಟೆ ತಾಲೂಕಿನಲ್ಲಿನ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರಾದ ಅರುಣ್ ಮಾಚಯ್ಯ ಅವರು ಒಮ್ಮೆ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂ.ಎಲ್.ಸಿ.ಯಾಗಿ ನಂತರದಲ್ಲಿ ಜೆ.ಡಿ.ಎಸ್. ಸೇರ್ಪಡೆಗೊಂಡು ಮತ್ತೊಂದು ಚುನಾವಣೆಯಲ್ಲಿ ಸಂಚಲನ ಮೂಡಿಸಿದ್ದರಾದರೂ ಜಯಶೀಲರಾಗಲಿಲ್ಲ. ಬಳಿಕ ಇವರು ಕೂಡ ಮಾತೃಪಕ್ಷ ಕಾಂಗ್ರೆಸ್‍ಗೇ ಮರಳಿದ್ದಾರೆ.
ಜಿಲ್ಲೆಯ ಮತ್ತೋರ್ವ ಪ್ರಮುಖ ನಾಯಕರಾಗಿದ್ದ ದಿವಂಗತ ಡಿ.ಎಸ್. ಮಾದಪ್ಪ ಅವರು ಮೊದಲು ಬಿ.ಜೆ.ಪಿ.ಯಿಂದ (ಮೊದಲ ಪುಟದಿಂದ) ಶಾಸಕರಾಗಿ ನಂತರದಲ್ಲಿ ಬಿ.ಜೆ.ಪಿ. ತೊರೆದು, ಬಂಡಾಯವಾಗಿ ಸ್ಪರ್ಧಿಸಿದ್ದಲ್ಲದೆ, ಮತ್ತೆ ಜೆ.ಡಿ.ಎಸ್.ಗೆ ಸೇರ್ಪಡೆಯಾಗಿದ್ದರು. ಯಂ.ಸಿ. ನಾಣಯ್ಯ ಅವರು ಜನತಾದಳದಲ್ಲಿದ್ದಾಗ ಅವರೊಂದಿಗೆ ಗುರುತಿಸಿಕೊಂಡಿದ್ದ ಟಿ.ಪಿ. ರಮೇಶ್ ಅವರು ಯಂ.ಸಿ.ಎನ್. ಬಳಿಕ ತಟಸ್ಥ ನಿಲುವು ತೋರಿದ್ದಾಗ ಕಾಂಗ್ರೆಸ್‍ಗೆ ಸೇರ್ಪಡೆಗೊಂಡು ಈಗಲೂ ಅದರಲ್ಲೇ ಮುಂದುವರಿದಿದ್ದಾರೆ.
ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡು ಬಳಿಕ ಆ ಪಕ್ಷದಿಂದ ದೂರವಾಗಿ ಜೆ.ಡಿ.ಎಸ್. ಸೇರ್ಪಡೆಯಾಗಿ ಅದರ ಜಿಲ್ಲಾ ಅಧ್ಯಕ್ಷರೂ ಆಗಿ ಮತ್ತೆ ನಿಲುವು ಬದಲಿಸಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡವರು ವಿ.ಪಿ. ಶಶಿಧರ್ ಅವರಾಗಿದ್ದಾರೆ. ಇದೀಗ ಕೆಲಸಮಯದ ಹಿಂದೆ ಕಾಂಗ್ರೆಸ್‍ನಲ್ಲೇ ಇದ್ದ ಕೆ.ಎಂ. ಗಣೇಶ್ ಕಾಂಗ್ರೆಸ್‍ಗೆ ವಿದಾಯ ಹೇಳಿ ಜೆ.ಡಿ.ಎಸ್.ನ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಹೆಚ್.ಬಿ. ಜಯಮ್ಮ, ವಿ.ಎಂ. ವಿಜಯ ಅವರು ಪಕ್ಷ ಬದಲಿಸಿ ಬೇರೆ ಬೇರೆ ಪಕ್ಷದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಇನ್ನುಳಿದಂತೆ ನಂತರದ ಹಂತದಲ್ಲಿ ಬರುವ ಹಲವಾರು ರಾಜಕೀಯ ವ್ಯಕ್ತಿಗಳೂ ಅತ್ತಿಂದಿತ್ತ ಅಲೆದಾಡಿರುವ ಈಗಲೂ ಈ ರೀತಿಯ ಧೋರಣೆ ತೋರುತ್ತಿರುವ ಪ್ರಸಂಗಗಳು ಜಿಲ್ಲೆಯಲ್ಲಿ ಪ್ರಸ್ತುತ ಸಾಮಾನ್ಯವಾದಂತಿದೆ. ಈಗಿನ ಸದ್ಯದ ರಾಜಕೀಯದಲ್ಲಿನ ಬಿಸಿ ಬಿಸಿ ವಿಚಾರವಾಗಿ ಪರಿಣಮಿಸುತ್ತಿರುವುದು ಸ್ಥಳೀಯ ಸರಕಾರ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ಜೆ.ಡಿ.ಎಸ್.ನಲ್ಲಿ ಪ್ರಮುಖರಾಗಿದ್ದ ಬಿ.ಎ. ಜೀವಿಜಯ ಅವರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಒಂದಷ್ಟು ಪ್ರಭಾವಿಯಾಗಿರುವ ಜೀವಿಜಯ ಅವರ ಈಗಿನ ನಿಲುವಿನಿಂದ ಯಾವ ರೀತಿಯ ರಾಜಕೀಯ ಏಳು-ಬೀಳು ಉಂಟಾಗಬಹುದೆಂಬ ಲೆಕ್ಕಾಚಾರಗಳು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
- ಶಶಿ ಸೋಮಯ್ಯ