ಮಡಿಕೇರಿ, ಡಿ. 15: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಮತ್ತಷ್ಟು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಿಗೆ ಇನ್ನಷ್ಟು ಮಾಹಿತಿ ನೀಡಬೇಕು. ಕೋವಿಡ್-19 ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರಕರಣಗಳು ಹೆಚ್ಚಾಗುತ್ತಿ ರುವ ಹಿನ್ನೆಲೆ ಕಳೆದ ಬಾರಿಯಂತೆ ಈಗಲೂ ಸಹ ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.ಪ್ರತಿ ಮತಗಟ್ಟೆಗಳಲ್ಲಿ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಬೇಕು. ತರಬೇತಿ ದಿನದಂದು ಹಾಗೂ ಮಸ್ಟರಿಂಗ್, ಡಿ ಮಸ್ಟರಿಂಗ್ ಮತ್ತು ಮತ ಎಣಿಕೆ ಸಂದರ್ಭದಲ್ಲಿ ಆರೋಗ್ಯ ತಂಡವನ್ನು ನಿಯೋಜಿಸಿ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಬೇಕು. ಕೋವಿಡ್ ಕೇರ್ ಸೆಂಟರ್ಗಳನ್ನು ಸಿದ್ಧತೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಹೆಚ್ಚಾದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ವೈದ್ಯಕೀಯ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರೊಂದಿಗೆ ಹಾಗೂ ಇತರ ತಾಂತ್ರಿಕ ತಜ್ಞರೊಂದಿಗೆ ತಮ್ಮ ಹಂತದಲ್ಲಿ ಸಭೆ ನಡೆಸಿ ಮಾಹಿತಿ ನೀಡಬೇಕು ಎಂದು ಹೇಳಿದರು. ಅನಸ್ತೇಸಿಯಾ, ಜೀವ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಿಂದ ಮಾಹಿತಿ ಪಡೆದರು.
ಸಾಂಕ್ರಾಮಿಕ ರೋಗಗಳ ಶಾಸ್ತ್ರಜ್ಞ ಡಾ. ಮಹೇಶ್ ಮಾಹಿತಿ ನೀಡಿ ಜಿಲ್ಲೆಯಲ್ಲಿ ಕೋವಿಡ್-19 ಗಂಟಲು ಮತ್ತು ಮೂಗು ದ್ರವ ಸಂಗ್ರಹದ ತಪಾಸಣೆಯನ್ನು ಇನ್ನಷ್ಟು ಹೆಚ್ಚಿಸಬೇಕಿದೆ ಎಂದು ಮನವಿ ಮಾಡಿದರು.
ಕಳೆದ ಡಿಸೆಂಬರ್ 8 ರಿಂದ 14 ರವರೆಗೆ ಮಡಿಕೇರಿ ತಾಲೂಕಿನಲ್ಲಿ 51, ಸೋಮವಾರಪೇಟೆ ತಾಲೂಕಿನಲ್ಲಿ 46, ವೀರಾಜಪೇಟೆ ತಾಲೂಕಿನಲ್ಲಿ 16 ಒಟ್ಟು 110 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ ಎಂದು ಡಾ. ಮಹೇಶ್ ಮಾಹಿತಿ ನೀಡಿದರು.
ವೀರಾಜಪೇಟೆ ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಕಡಿಮೆಯಾಗುತ್ತಿದ್ದು, ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ತಲಾ ಶೇ.46, 42 ರಷ್ಟು ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಆದ್ದರಿಂದ ಪ್ರಾಥಮಿಕ ಸಂಪರ್ಕಿತರು ಹಾಗೂ ವಲ್ನರಬಲ್ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚಿನ ನಿಗಾವಹಿಸಬೇಕಿದೆ ಎಂದು ಅವರು ತಿಳಿಸಿದರು.
ಆರ್ಸಿಎಚ್.ಅಧಿಕಾರಿ ಡಾ. ಗೋಪಿನಾಥ್ ಅವರು ಕೋವಿಡ್ ಲಸಿಕೆ ಲಭ್ಯವಾದ ಸಂದರ್ಭದಲ್ಲಿ ಪ್ರಥಮ ಹಂತದಲ್ಲಿ ಕೋವಿಡ್ ಲಸಿಕೆ ನೀಡುವ ಸಂಬಂಧ ಅಗತ್ಯ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ರೂಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ .ಕಾರ್ಯಪ್ಪ, ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಡಾ.ಲೋಕೇಶ್, ಡಾ. ರೂಪೇಶ್, ಡಾ.ಪ್ರದೀಪ್, ಡಾ. ಪದ್ಮರಾಜ್, ಡಾ. ನಜೀಮಾ, ತಾಲೂಕು ವೈದ್ಯಾಧಿಕಾರಿಗಳಾದ ಚೇತನ್, ಶ್ರೀನಿವಾಸ ಇತರರು ಹಲವು ಮಾಹಿತಿ ನೀಡಿದರು.