ಮಡಿಕೇರಿ, ಡಿ. 15: ಗ್ರಾ.ಪಂ. ಚುನಾವಣೆ ಮತದಾನ ಸಂಬಂಧ ಚುನಾವಣಾಧಿಕಾರಿ ಗೊಂದಲದ ಮಾಹಿತಿ ನೀಡಿದ್ದು, ಗರ್ವಾಲೆ ಗ್ರಾ.ಪಂ. ಚುನಾವಣೆಯನ್ನು ಮುಂದೂಡಬೇಕೆಂದು ಸ್ಥಳೀಯ ನಿವಾಸಿ ಸಿ.ಸಿ. ಸಂತೋಷ್ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಸೂರ್ಲಬ್ಬಿ ವಾರ್ಡ್ನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ತಲಾ ಒಂದು ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆ ಮೀಸಲು ಸ್ಥಾನಕ್ಕೆ ಸದಸ್ಯ ಸ್ಥಾನವಿದ್ದು, ಈ ಎರಡು ಸ್ಥಾನದಲ್ಲಿ ಪ್ರತಿಯೊಬ್ಬ ಮತದಾರರಿಗೂ ಎರಡು ಮತದಾನದ ಅವಕಾಶವಿದೆ. ಈ ಪೈಕಿ ಎರಡು ಮತಗಳನ್ನು ಓರ್ವ ಪುರುಷ ಹಾಗೂ ಮಹಿಳೆಗೆ ನೀಡಬೇಕು.
ಆದರೆ, ರಿಟರ್ನಿಂಗ್ ಆಫೀಸರ್ ಲಭ್ಯವಿರುವ 2 ಮತದಲ್ಲಿ ಇಬ್ಬರು ಪುರುಷರಿಗೆ ಅಥವಾ ಇಬ್ಬರು ಮಹಿಳೆಯರಿಗೆ ನೀಡಬಹುದು ಎಂದು ಗೊಂದಲದ ಮಾಹಿತಿ ನೀಡಿದ್ದಾರೆ ಎಂದು ಸತೀಶ್ ದೂರಿದ್ದಾರೆ.
ಈ ಸಂಬಂಧ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಚುನಾವಣೆಯನ್ನು ಮುಂದೂಡಬೇಕೆಂದು ಜಿಲ್ಲಾಧಿಕಾರಿಗೆ ಲಿಖಿತ ಮನವಿ ಮಾಡಿದ್ದಾರೆ.