ಭಾಗಮಂಡಲ, ಡಿ. 15: ಸಮೀಪದ ಚೇರಂಬಾಣೆಯ ಕೊಳಗದಾಳು ಗ್ರಾಮದ ಪಾಕ ದುರ್ಗಾಪರಮೇಶ್ವರಿ ದೇವಾಲಯದ ವಾರ್ಷಿಕ ಉತ್ಸವ ಇಂದು ನಡೆಯಿತು. ಬೆಳಿಗ್ಗೆ 5.30ಕ್ಕೆ ತಕ್ಕಮುಖ್ಯಸ್ಥರು ಹಾಗೂ ಊರಿನವರು ಪಾಕ ಹೊಳೆಯಲ್ಲಿ ಸ್ನಾನ ಮಾಡಿ ಗಂಗಾಪೂಜೆ ನೆರವೇರಿಸಿದ ಬಳಿಕ ದೇವಾಲಯದಲ್ಲಿ ಅಲಂಕಾರ ಪೂಜೆ ನಡೆಯಿತು.
ಬಳಿಕ ಮುಕ್ಕಾಟಿ ಐನ್‍ಮನೆಗೆ ತೆರಳಿ ಹರಕೆ ಸಾಮಗ್ರಿ ಹಾಗೂ ಭಂಡಾರವನ್ನು ದೇವಾಲಯಕ್ಕೆ ದುಡಿಕೊಟ್ಟು ಪಾಟ್‍ನೊಂದಿಗೆ ತಂದು ಮೂರು ಬಾರಿ ಪ್ರದಕ್ಷಿಣೆ ಹಾಕಿ ಭಂಡಾರ ಡಬ್ಬಿ ಇರಿಸಲಾಯಿತು. ಭಕ್ತಾದಿಗಳು ಮೀನಿಗೆ ಅಕ್ಕಿಹಾಕಿ ದೇವಾಲಯಕ್ಕೆ ಬಂದು ಹರಕೆ ಸಲ್ಲಿಸಿದರು. ಊರಿನವರು ತಂದ ಹೊಸ ಅಕ್ಕಿಯನ್ನು ದೇವಾಲಯಕ್ಕೆ ನೀಡಿ ಪಾಯಸ ಮಾಡಿ ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು.
ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವದರೊಂದಿಗೆ ಭಕ್ತರು ವಿರಳವಾಗಿ ಪಾಲ್ಗೊಂಡಿದ್ದರು. ತಕ್ಕ ಮುಖ್ಯಸ್ಥರಾಗಿ ಮುಕ್ಕಾಟಿ ಕುಟುಂಬಸ್ಥರು, ಮುದ್ರಣಿಯಂಡ ಕುಟುಂಬಸ್ಥರು ಕಾರ್ಯನಿರ್ವಹಿಸಿದರು.