ಗೋಣಿಕೊಪ್ಪ, ಡಿ. 16: ತುರ್ತು ಸಂದರ್ಭಗಳÀಲ್ಲಿ ಅರಣ್ಯ ಇಲಾಖೆಗೆ ಸಹಕರಿಸುವ ತಿತಿಮತಿ ಅರಣ್ಯ ವ್ಯಾಪ್ತಿಯ ಕ್ಷಿಪ್ರ ಕಾರ್ಯಪಡೆ ತಂಡ (ಆರ್.ಆರ್.ಟಿ) ತಂಡವು ತನ್ನ ಕಾರ್ಯಕ್ಷೇತ್ರದ ಜವಾಬ್ದಾರಿಯನ್ನು ಮರೆತು ಇಲಾಖೆಯ ನರ್ಸರಿ ವ್ಯವಸ್ಥೆಯಲ್ಲಿನ ಬೀಜ ಬಿತ್ತುವುದು ಹಾಗೂ ಗಿಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ಆನೆಗಳು ನಾಡಿಗೆ ನುಗ್ಗಿ ಗ್ರಾಮಗಳಲ್ಲಿ ಹಾಡಿಗಳಲ್ಲಿ ದಾಂಧಲೆ ನಡೆಸುತ್ತಿದ್ದರೂ ಕಾಡಿಗಟ್ಟುವ ಕಾರ್ಯ ನಡೆಯುತ್ತಿಲ್ಲ.ತಿತಿಮತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕ್ಷಿಪ್ರ ಕಾರ್ಯಪಡೆ ತಂಡದಲ್ಲಿ ನಾಲ್ಕು ವಿಭಾಗಗಳಲ್ಲಿ ಸುಮಾರು 28 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ತಂಡದ ಕಾರ್ಯಕ್ಷೇತ್ರವನ್ನು ಮರೆತು ಬೇರೆ ಬೇರೆ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂಬ ಆರೋಪ ವ್ಯಕ್ತಗೊಂಡಿದೆ. ತಿತಿಮತಿ ವ್ಯಾಪ್ತಿಯಲ್ಲಿ 2 ತಂಡ, ಚೆನ್ನಯ್ಯನಕೋಟೆ ವ್ಯಾಪ್ತಿಯಲ್ಲಿ 2 ತಂಡ ಆನೆ ಓಡಿಸುವ ಹಾಗೂ ಹುಲಿಯನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿಸಿ ಕೊಂಡಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಈ ತಂಡ ಸ್ಥಳೀಯ ಅರಣ್ಯಾಧಿಕಾರಿಗಳ ನಿಯಂತ್ರಣ ದಲ್ಲಿರುತ್ತದೆ. ಹೀಗಾಗಿ ಅಧಿಕಾರಿಗಳು ಆದೇಶ ನೀಡಿದ ಕೆಲಸವನ್ನು ಪಾಲಿಸಬೇಕಾಗಿದೆ. ಈ ನಡುವೆ ತಂಡವು ತಾನು ಮಾಡಬೇಕಾದ ಮುಖ್ಯ ಕಾಯಕವನ್ನು ಮರೆತು ತಿತಿಮತಿ ಮಜ್ಜಿಗೆ ಹಳ್ಳ ನರ್ಸರಿಯಲ್ಲಿ ಬೀಜ ಬಿತ್ತನೆ ಹಾಗೂ ಗಿಡ ನೆಡುವ ಕೆಲಸ ನಿರ್ವಹಿಸುತ್ತಿದ್ದಾರೆ. 20 ಜನರ ತಂಡಕ್ಕೆ ಕಾಡಿನಲ್ಲಿ ಸಂಚರಿಸಲು 3 ವಾಹನ ವ್ಯವಸ್ಥೆಯಿದೆ. ಆದರೆ ವಾಹನವು ಸಹ ನರ್ಸರಿಯ ಮುಂಭಾಗದಲ್ಲೆ ದಿನವಿಡೀ ನಿಂತಿರುತ್ತದೆ. ಇತ್ತೀಚಿನ ದಿನಗಳಲ್ಲಿ ತಿತಿಮತಿ ವ್ಯಾಪ್ತಿಯಲ್ಲಿ ಆನೆಗಳು ಹಾಡಿಗಳ ಮೇಲೆ ಹಾಗೂ ವಾಹನ ಸವಾರರ ಮೇಲೆ ಹೆಚ್ಚಾಗಿ ದಾಳಿ ನಡೆಸುತ್ತಿದ್ದರೂ ಆನೆಗಳನ್ನು ಕಾಡಿಗಟ್ಟಲು ತಂಡ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ನಿಯಂತ್ರಣದಲ್ಲಿ ತಂಡ ನಲುಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ನರ್ಸರಿ ಕೆಲಸ ಕಾರ್ಯಗಳಿಗೆ ಬೇರೆಯೇ ಕೂಲಿ ಕಾರ್ಮಿಕರು ಇದ್ದರೂ ಅವರ ಗೈರು ಹಾಜರಿಯಲ್ಲಿ ಆರ್.ಆರ್.ಟಿ ತಂಡವನ್ನು ಬಳಸಿಕೊಳ್ಳಲಾಗುತ್ತಿದೆ. ಆರ್.ಆರ್.ಟಿ ತಂಡಕ್ಕೆ ತಿಂಗಳ ವೇತನವಿದೆ. ಆದರೂ ಇವರನ್ನು ನರ್ಸರಿ ಕೆಲಸಗಳಿಗೆ ಬಳಸಿಕೊಳ್ಳುವ ಮೂಲಕ ಕೂಲಿ ಕಾರ್ಮಿಕರ ಹಣವನ್ನು
ಇವರ ಹೆಸರಿನಲ್ಲಿ ದುರುಪ ಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಹೇಳಿಕೆ : ಆನೆ ನಾಡಿಗೆ ನುಗ್ಗಿ ಅಥವಾ ಕಾಫಿ ತೋಟಕ್ಕೆ ಬಂದು ತನ್ನ ಅಟ್ಟಹಾಸವನ್ನು ಮೆರೆಯು ತ್ತಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು ಆರ್.ಆರ್.ಟಿ. ತಂಡ ಆನೆ ಓಡಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಕಳೆದ ಕೆಲ ದಿನಗಳಲ್ಲಿ ತಿತಿಮತಿ ಶಾಲಾ ಮೈದಾನದಲ್ಲಿ ಬೆಳಗ್ಗಿನ ಜಾವ ಮಕ್ಕಳು ಆಡುತ್ತಿದ್ದ ಸಂದರ್ಭ ಆನೆ ದಾಳಿ ನಡೆಸಲು ಮುಂದಾಗಿದೆ. ಇಂತಹ
(ಮೊದಲ ಪುಟದಿಂದ) ಭಯದ ವಾತಾವರಣ ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ. ಆನೆಯನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕಾದ ತಂಡ ಯಾವುದೇ ಕಾರ್ಯವನ್ನು ಮಾಡುತ್ತಿಲ್ಲ ಎಂದು ತಿತಿಮತಿ ಕೃಷಿ ಮೋರ್ಚ ಅಧ್ಯಕ್ಷ ಚೆಪ್ಪುಡೀರ ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್.ಆರ್.ಟಿ. ತಂಡ ಬಹಳ ಜವಾಬ್ದಾರಿಯುತವಾಗಿ ತನ್ನ ಕಾರ್ಯವನ್ನು ನಿಭಾಯಿಸುತ್ತಿದೆ. ಯಾವುದೇ ಸಮಸ್ಯೆ ಇಲ್ಲ. ಪ್ರತಿಯೊಂದು ಅರಣ್ಯದ ಕಾರ್ಯಗಳಲ್ಲಿ ತಂಡ ತೊಡಗಿಸಿಕೊಂಡು ತಮ್ಮ ಕಾರ್ಯಧ್ಯಕ್ಷತೆಯನ್ನು ಮೆರೆಯುತ್ತಿದೆ. ನರ್ಸರಿ ಕೆಲಸಕ್ಕೆ ಬೇರೆಯೇ ಕೂಲಿ ಕಾರ್ಮಿಕರು ಬರುತ್ತಿದ್ದಾರೆ. ಅನಿವಾರ್ಯ ಗೈರು ಹಾಜರಿಯಲ್ಲಿ ಕೆಲವೊಮ್ಮೆ ಆರ್.ಆರ್.ಟಿ ತಂಡದ ಸದಸ್ಯರಿಂದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸುತ್ತೇವೆ ಎಂದು ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ ಹನುಗುಂದ ತಿಳಿಸಿದ್ದಾರೆ.
-ಎನ್.ಎನ್. ದಿನೇಶ್