ಗೋಣಿಕೊಪ್ಪ ವರದಿ, ಡಿ. 15: ಮತದಾನ ಬಹಿಷ್ಕಾರ ನಿರ್ಧಾರ ನಿಡುಗುಂಬ ಗ್ರಾಮಸ್ಥರ ಒಮ್ಮತದ ತೀರ್ಮಾನವಲ್ಲ ಎಂದು ನಿಡುಗುಂಬ ಗ್ರಾಮದ ಹಿರಿಯರಾದ ತಾಣಚ್ಚೀರ ಜಿ. ಕರುಂಬಯ್ಯ ತಿಳಿಸಿದ್ದಾರೆ.
2008 ರಿಂದ ಹಂತ, ಹಂತವಾಗಿ ಗ್ರಾಮವು ಅಭಿವೃದ್ಧಿ ಸಾಧಿಸುತ್ತಿದ್ದು, ಒಂದಷ್ಟು ಅಧಿಕಾರಿಗಳ ಬೇಜವ್ದಾರಿಯಿಂದ ಕುಂಠಿತವಾಗಿದೆ. ಇದನ್ನೇ ಮುಂದಿಟ್ಟುಕೊಂಡು ಮತದಾನ ಬಹಿಷ್ಕಾರ ಸರಿಯಲ್ಲ. ಬಹಿಷ್ಕಾರ ಹೇಳಿಕೆ ನೀಡಿರುವವರು ಎಲ್ಲಾರೊಂದಿಗೆ ಚರ್ಚಿಸಿ ನಿರ್ಧರಿಸಿಲ್ಲ. ಇದರಿಂದಾಗಿ ನಾವು ಬಹಿಷ್ಕಾರಕ್ಕೆ ಸಹಕಾರ ನೀಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಹಿಷ್ಕಾರ ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಗ್ರಾಮದ ಎಲ್ಲಾ ಜನತೆ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಶಾಸಕ ಕೆ.ಜಿ. ಬೋಪಯ್ಯ ಅವರ ಅವಧಿಯಲ್ಲಿ ಸುಮಾರು ರೂ. 70 ಲಕ್ಷ ಅನುದಾನದಲ್ಲಿ ರಸ್ತೆಗಳು ಅಭಿವೃದ್ಧಿಗೊಂಡಿದೆ. 8 ಕುಟುಂಬಗಳಿಗೆ ಬಾವಿ ತೋಡಲಾಗಿದೆ. ಅನಾವಶ್ಯಕವಾಗಿ ಜನಪ್ರತಿನಿಧಿಗಳನ್ನು ದೂರಿ ದಂತಾಗುತ್ತದೆ ಎಂದು ತಿಳಿಸಿದರು.
ತಾಣಚ್ಚೀರ ಎಸ್. ಬೆಳ್ಯಪ್ಪ ಮಾತನಾಡಿ, ಮೊದಲು ಗ್ರಾಮ ದ್ವೀಪದಂತಿತ್ತು. ಗದ್ದೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದೇವು. 2008 ರಿಂದ ರಸ್ತೆ ಅಭಿವೃದ್ಧಿ ಕಾಣುತ್ತಿದೆ. ಮಣ್ಣು, ಕಲ್ಲು ಹಾಕಿ ಸರಿಪಡಿಸಲಾಗಿದೆ. ಇದನ್ನು ಕಾಂಕ್ರಿಟ್ ಮೂಲಕ ಅಭಿವೃದ್ಧಿಗೂ ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಒಂದು ರಸ್ತೆಯು ಡಾಂಬರೀಕರಣ ಗೊಂಡಿದೆ. ಮಳೆಗಾಲದಲ್ಲಿ ಒಡೆದಿದ್ದ ರಸ್ತೆಯನ್ನು ಇದೀಗ ಅತಿವೃಷ್ಟಿ ಪರಿಹಾರದಲ್ಲಿ ಬಿಡುಗಡೆಯಾಗಿರುವ ಹಣದಲ್ಲಿ ತಡೆಗೋಡೆ ಮೂಲಕ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಸರ್ಕಾರದಿಂದ ರೂ. 70 ಲಕ್ಷ ಬಿಡುಗಡೆ ಮಾಡಿದೆ. ಇದರ ಕಾಮಗಾರಿ ಆರಂಭವಾಗಬೇಕಿದೆ ಎಂದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ತೀತಮಾಡ ಮಂದಯ್ಯ, ಚೆನಿಯಪಂಡ ಬೋಪಣ್ಣ, ತೀತಮಾಡ ಪಿ. ಬೋಪಯ್ಯ ಇದ್ದರು.