ವೀರಾಜಪೇಟೆ, ಡಿ. 15: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಈ ಹಿಂದೆ ಇದ್ದ ಸುಮಾರು 263 ಹೆಕ್ಟೇರ್ ಪ್ರದೇಶಕ್ಕೆ ಹೊಸದಾಗಿ 638 ಹೆಕ್ಟೇರ್ ಪ್ರದೇಶದ ಆಸ್ತಿಯನ್ನು ಸೇರಿಸಿ ವೀರಾಜಪೇಟೆ ಪಟ್ಟಣವನ್ನು ಒಟ್ಟು 901.70 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಲಾಗಿದೆ. ಗ್ರಾಮಾಂತರ ಪ್ರದೇಶವಾದ ಬಿಟ್ಟಂಗಾಲ. ಅಂಬಟ್ಟಿ, ಮಗ್ಗುಲ ಚೆಂಬೆಬೆಳ್ಳೂರು, ಬೇಟೋಳಿ, ಆರ್ಜಿ ಗ್ರಾಮಗಳಿಗೆ ಸೇರಿದಂತೆ ಇತರ ಗ್ರಾಮಗಳಿಗೆ ಹರಿದು ಹಂಚಿ ಹೋಗಿದ್ದ ಪಟ್ಟಣದ ಸಾರ್ವಜನಿಕ ಆಸ್ತಿ ಈಗ ವೀರಾಜಪೇಟೆ ಪಟ್ಟಣಕ್ಕೆ ಸೇರ್ಪಡೆಗೊಂಡಿದ್ದು, ಇದರಿಂದ ಪಟ್ಟಣ ವಿಸ್ತರಣೆಯೊಂದಿಗೆ ಪಟ್ಟಣ ಪಂಚಾಯಿತಿಯ ಆದಾಯವು ಏರಿಕೆ ಕಾಣಲಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಚುನಾವಣೆ ನಡೆದು ಎರಡು ವರ್ಷಗಳ ನಂತರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಆರ್. ಸುಶ್ಮಿತಾ ಅಧ್ಯಕ್ಷತೆಯಲ್ಲಿ ಮೊದಲ ಸಭೆ ಇಂದು ಇಲ್ಲಿನ ಪುರಭವನದಲ್ಲಿ ನಡೆಯಿತು.ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿ ಪಂಚಾಯಿತಿ ಕಚೇರಿಯಿಂದ ಸದಸ್ಯರಿಗೆ ಕಳುಹಿಸಿರುವ ಅಜೆಂಡಾದ ಕಾರ್ಯಸೂಚಿಯ 5ರಲ್ಲಿ ಲೋಪದೋಷವಿದೆ. ತಹಶೀಲ್ದಾರ್ ಆಡಳಿತಾಧಿಕಾರಿಯಾಗಿದ್ದಾಗ ಸದಸ್ಯರುಗಳ ಗಮನಕ್ಕೆ ಮಾಹಿತಿ ನೀಡದೆ ಸಭೆ ನಡೆದಿದೆ. ಆ ಅವಧಿಯ ಸಭೆಯ ತೀರ್ಮಾನ ಟೆಂಡರ್, ಆದಾಯ ವೆಚ್ಚಗಳನ್ನು (ಮೊದಲ ಪುಟದಿಂದ) ಒಪ್ಪಲು ಸಾಧ್ಯವಿಲ್ಲ ಎಂದು ದೂರಿದರು. ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಮಾತನಾಡಿ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಎರಡು ಕಾಮಗಾರಿಯನ್ನು ಶೇಕಡ 50ಕ್ಕೂ ಕಡಿಮೆಗೆ ರಮೇಶ್ ಎಂಬ ಗುತ್ತಿಗೆದಾರನಿಗೆ ನೀಡಲಾಗಿದೆ. ಇದರಿಂದ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವಿಲ್ಲ.ಇಲ್ಲಿನ ಮೊಗರಗಲ್ಲಿಯ ನಿವಾಸಿಗಳಿಗೆ ಬೇತರಿ ಗ್ರಾಮದ ಕಾವೇರಿ ಹೊಳೆಯ ನಲ್ಲಿ ನೀರು ಪೊರೈಕೆಯಾಗುತ್ತಿಲ್ಲ. ಇದಕ್ಕೆ ಅಧಿಕಾರಿಗಳು ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ಎಸ್.ಎಚ್. ಮತೀನ್ ಮಾತನಾಡಿ ಇಲ್ಲಿನ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ಕಿರಿದಾದ ರಸ್ತೆಯಲ್ಲಿ ನೀರು ಶೇಖರಣಾ ಕೇಂದ್ರಕ್ಕೆ ಕಾಮಗಾರಿ ಆರಂಭಿಸಲಾಗುತ್ತಿದೆ. ಇದರಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.
ಪಟ್ಟಡ ರಂಜಿ ಪೂಣಚ್ಚ ಮಾತನಾಡಿ ವೀರಾಜಪೇಟೆ ಬೀದಿ ದೀಪಗಳ ಅವ್ಯವಸ್ಥೆಯಿಂದ ಪಟ್ಟಣದಾದ್ಯಂತ ಕಾರ್ಗತ್ತಲು ಆವರಿಸುತ್ತಿದೆ. ಮೂರು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಬೀದಿ ದೀಪಗಳ ನಿರ್ವಹಣೆ ಮಾಡುತ್ತಿದ್ದಾಗ ಬೀದಿ ದೀಪಗಳು ಉರಿಯುತ್ತಿದ್ದವು. ಈಗ ಗುತ್ತಿಗೆ ನೀಡಿದ ಮೇಲೆ ಬೀದಿ ದೀಪಗಳು ಉರಿಯುತ್ತಿಲ್ಲ. ಈ ಗುತ್ತಿಗೆದಾರನನ್ನು ಬದಲಿಸಬೇಕು. ಆಡಳಿತಾಧಿಕಾರಿ ಆಡಳಿತದ ಸಮಯದಲ್ಲಿ ಸದಸ್ಯರುಗಳ ಗೈರು ಹಾಜರಾತಿಯಲ್ಲಿ ನಡೆದ ಸಭೆಯ ನಡಾವಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಇದರ ವಿವರವಾದ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಮಂಡಿಸುವಂತೆ ಆಗ್ರಹಿಸಿದರು. ವಿವಿಧ ರೀತಿಯ ತೆರಿಗೆಯನ್ನು ಪಾವತಿಸಲು ಕಚೇರಿಗೆ ಬರುವ ಕಟ್ಟಡಗಳ ಮಾಲೀಕರೊಂದಿಗೆ ಸಿಬ್ಬಂದಿಗಳು ಸಹಕರಿಸುತ್ತಿಲ್ಲ ಎಂದು ದೂರಿದಾಗ ಡಿ.ಪಿ. ರಾಜೇಶ್, ಮಹಮ್ಮದ್ ರಾಫಿ ಬೆಂಬಲಿಸಿದರು.
ಸಭೆಯ ವಿಚಾರ ವಿನಿಮಯದಲ್ಲಿ ನಾಮ ನಿರ್ದೇಶನ ಸದಸ್ಯರುಗಳಾದ ಕೂತಂಡ ಸಚಿನ್, ಇ.ಸಿ. ಜೀವನ್, ಚುನಾಯಿತ ಬಿ.ಜಿ. ಅನಿತಾ ಕುಮಾರ್, ಸುಭಾಶ್, ಫಸಿಃಹತಬ್ಸಮ್, ವಿ.ಆರ್. ರಜನಿಕಾಂತ್. ಬಿ.ಎಂ. ಸುನೀತಾ, ಆಶಾ ಸುಬ್ಬಯ್ಯ ಭಾಗವಹಿಸಿದ್ದರು.
ಸಭೆಯಲ್ಲಿ ಮಡಿಕೇರಿ ಟೌನ್ ಪ್ಲಾನಿಂಗ್ನ ಅಧಿಕಾರಿ ಲಾವಣ್ಯ, ಬಿಪಿನ್ ಚಂಗಪ್ಪ, ಪ್ರವಾಸೋದ್ಯಮ ಏಜೆನ್ಸಿಯ ಅಧಿಕಾರಿ ಪ್ರಮೋದ್, ನಗರ ನೀರು ಸರಬರಾಜು ಮಂಡಳಿಯ ಅಜಯ್ ಭಾಗವಹಿಸಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಟೌನ್ ಪ್ಲಾನಿಂಗ್ ಕಟ್ಟಡ ಕಟ್ಟುವ ಅನುಮತಿ ನೀಡುವಲ್ಲಿ ವಿಳಂಬ, ಸಲ್ಲದ ದಾಖಲೆಗಳ ಬೇಡಿಕೆ ಕುರಿತು ಸದಸ್ಯರುಗಳು ಅಧಿಕಾರಿಯ ಸಮ್ಮುಖದಲ್ಲಿ ಅಸಮಧಾನ ವ್ಯಕ್ತ ಪಡಿಸಿದರು.
ಸಭೆಯ ಪ್ರಾರಂಭದಲ್ಲಿ ಅಭಿಯಂತರ ಎನ್.ಎಂ. ಹೇಮ್ಕುಮಾರ್ ನೂತನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಚುನಾಯಿತಿ ಸದಸ್ಯರುಗಳು, ನಾಮ ನಿರ್ದೇಶನ ಸದಸ್ಯರುಗಳನ್ನು ಸ್ವಾಗತಿಸಿ ಅಭಿನಂದಿಸಿದರು. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಪ್ರಸ್ತಾವಿಕವಾಗಿ ಮಾತನಾಡಿದರು.