ಸೋಮವಾರಪೇಟೆ, ಡಿ. 15: ಗ್ರಾಮ ಪಂಚಾಯಿತಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಸ್ತುತತೆಯಲ್ಲಿ, ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅಬಕಾರಿ ಇಲಾಖಾಧಿಕಾರಿಗಳು, ಮದ್ಯ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮಾದಾಪುರ ಸಮೀಪದ ಕಾಂಡನಕೊಲ್ಲಿ ಗ್ರಾಮದಲ್ಲಿ ಹೀರೋಹೋಂಡ ಬೈಕ್‍ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆ ಹಾಲೇರಿ ಗ್ರಾಮದ ಗುರುವಪ್ಪ ಅವರ ಪುತ್ರ ಜಿ. ರವಿ ಎಂಬಾತನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ ಬೈಕ್‍ನಲ್ಲಿ 8.640 ಲೀಟರ್ ಮದ್ಯವನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬೈಕ್, ಮದ್ಯ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ವಲಯ ಅಬಕಾರಿ ನಿರೀಕ್ಷಕಿ ಆರ್.ಎಂ. ಚೈತ್ರ, ಅಬಕಾರಿ ರಕ್ಷಕರುಗಳಾದ ಕೆ.ವಿ. ಸುಮತಿ, ಮಹಾಂತೇಶ್ ಸುಣಗಾರ, ಹಿರೇಣ್ಣ ಮ್ಯಾಕೇರಿ,, ಚಾಲಕ ಜಿತೇಂದ್ರ ಅವರುಗಳು ಭಾಗವಹಿಸಿದ್ದರು.