ಸಿದ್ದಾಪುರ, ಡಿ. 16: ಕಾಡಾನೆಗಳ ದಾಳಿಯಿಂದ ಹಾನಿಗೊಳಗಾದ ಆದಿವಾಸಿಗಳ ಮನೆಗಳನ್ನು ಶಾಸಕ ಕೆ.ಜಿ ಬೋಪಯ್ಯ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ 6 ತಿಂಗಳಿನಿಂದ ನಿರಂತರವಾಗಿ ಕಾಡಾನೆಗಳು ಚೆನ್ನಯ್ಯನ ಕೋಟೆ ಗ್ರಾ.ಪಂ ವ್ಯಾಪ್ತಿಯ ಚೆನ್ನಂಗಿಬಸವನಹಳ್ಳಿ ಹಾಡಿಯಲ್ಲಿರುವ ಮನೆಗಳ ಮೇಲೆ ದಾಳಿ ನಡೆಸುತ್ತಾ ಮನೆಗಳಿಗೆ ಹಾನಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆದಿವಾಸಿಗಳ ಹೋರಾಟ ಸಮಿತಿಯ ಮುಖಂಡ ಜೆ.ಕೆ ಅಪ್ಪಾಜಿಯವರು ಶಾಸಕ ಕೆ.ಜಿ ಬೋಪಯ್ಯ ಅವರ ಗಮನಕ್ಕೆ ಈ ವಿಚಾರವನ್ನು ತಂದು ಕಾಡಾನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಬೋಪಯ್ಯ ಅವರು ಹಾಡಿಗೆ ಭೇಟಿ ನೀಡಿ ಕಾಡಾನೆಗಳ ದಾಳಿಯಿಂದ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದರು. ಈ ಸಂದರ್ಭ ಮಾತನಾಡಿದ ಆದಿವಾಸಿ ಮುಖಂಡ ಜೆ.ಕೆ ಅಪ್ಪಾಜಿ ಕಳೆದ 6 ತಿಂಗಳಿನಿಂದ ನಿರಂತರವಾಗಿ ಕಾಡಾನೆಗಳು ಮನೆಗಳ ಮೇಲೆ ದಾಳಿ ನಡೆಸುತ್ತಾ ಮನೆ ಬಾಗಿಲುಗಳನ್ನು ಮುರಿದು ಹಾಕುತ್ತಿವೆ. ಅಲ್ಲದೇ ಮನೆಯ ವಸ್ತುಗಳನ್ನು ನಾಶಗೊಳಿಸಿವೆ ಎಂದರು. ಕಾಡಾನೆ ದಾಳಿಯಿಂದಾಗಿ ಚೆನ್ನಂಗಿಬಸವನಹಳ್ಳಿ ಹಾಡಿಯಲ್ಲಿ 5 ಮನೆಗಳು ಜಖಂಗೊಂಡಿದೆ ಅಲ್ಲದೇ ಆನೆ ದಾಳಿಯಿಂದ ಇತ್ತೀಚೆಗೆ ನಿವಾಸಿಯೊಬ್ಬರು ಗಂಭೀರ ಗಾಯಗೊಂಡಿದ್ದರು ಎಂದು ಮಾಹಿತಿ ನೀಡಿದರು. ಕೂಡಲೇ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಹಾಡಿಯ ನಿವಾಸಿ ಗಣೇಶ್ ಮಾತನಾಡಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಚೆನ್ನಂಗಿಬಸವನಹಳ್ಳಿ ಗ್ರಾಮದ ಹಾಡಿಯಲ್ಲಿ ಚೆನ್ನಯ್ಯನ ಕೋಟೆಯ ನಿವಾಸಿಯಾಗಿರುವ ಗಣೇಶ ಎಂಬವರು ಗುತ್ತಿಗೆ ಪಡೆದುಕೊಂಡು ನಿರ್ಮಿಸಿರುವ ಮನೆಯು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದರಲ್ಲದೆ, ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹಾಗೂ ನೀರಿನ ಸಮಸ್ಯೆ ಇದ್ದು, ವಿದ್ಯುತ್ ಸಂಪರ್ಕ ಪಡೆದುಕೊಂಡ ಕೆಲವು ಕುಟುಂಬಗಳಿಗೆ ಅನಗತ್ಯವಾಗಿ ಸಾವಿರಾರು ರೂಪಾಯಿಗಳ ಬಿಲ್ ಬಂದಿದ್ದು, ಇದರಿಂದ ಸಮಸ್ಯೆಯಾಗಿದೆ ಎಂದರು. ಹಾಡಿಗಳಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅರಣ್ಯ ಇಲಾಖಾ ಅಧಿಕಾರಿಗಳು ಅಡ್ಡಿ ಪಡಿಸುತ್ತಿದ್ದಾರೆ ಎಂದು ಆದಿವಾಸಿಗಳು ದೂರಿದರು.
ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಸ್ಪಂದಿಸುವಂತೆ ಹಾಡಿಯ ನಿವಾಸಿಗಳು ಶಾಸಕರ ಬಳಿ ಮನವಿ ಮಾಡಿಕೊಂಡರು. ಈ ಸಂದರ್ಭ ಮಾತನಾಡಿದ ಶಾಸಕ ಕೆ.ಜಿ ಬೋಪಯ್ಯ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವನ್ಯ ಜೀವಿ ವಿಭಾಗದ ನಿರ್ದೇಶಕರಿಗೆ ಸೂಚನೆ ನೀಡಲಾಗಿದ್ದು, ಚೆನ್ನಂಗಿಬಸವನಹಳ್ಳಿ ವ್ಯಾಪ್ತಿ, ನಾಗರಹೊಳೆ ಅಭಯಾರಣ್ಯಕ್ಕೆ ಸೇರಿದ್ದಾಗಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾಡಾನೆ ಹಾವಳಿಯನ್ನು ತಡೆಗಟ್ಟಲು ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ ಎಂದರು. ಹಾಡಿಗಳಲ್ಲಿ ನಿರ್ಮಿಸಿರುವ ಕಳಪೆ ಗುಣಮಟ್ಟದ ಮನೆಗಳ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ದೂರವಾಣಿ ಮೂಲಕ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳ ಬಳಿ ಮಾತನಾಡಿದ ಶಾಸಕರು ಕಾಡಾನೆ ದಾಳಿಗೆ ಒಳಗಾದ ಮನೆಗಳನ್ನು ಕೂಡಲೇ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಅಲ್ಲದೇ ಕಳಪೆ ಗುಣಮಟ್ಟದ ಮನೆ ನಿರ್ಮಾಣ ಮಾಡಿರುವ ಗುತ್ತಿಗೆದಾರನಿಗೆ ಹಣ ಮಂಜೂರಾತಿ ಮಾಡದೆ ತಡೆಹಿಡಿಯುವಂತೆ ಆದೇಶ ನೀಡಿದರು. ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸೇರಿ ರೈಲ್ವೆ ಬ್ಯಾರಿಕೇಡ್‍ಗಳ ಕಾಮಗಾರಿಯನ್ನು ಆರಂಭಿಸುವುದಾಗಿ ತಿಳಿಸಿದರು. ಹಾಡಿಗಳಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅಡ್ಡಿಪಡಿಸದಂತೆ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಮಾಜಿ ಕಾರ್ಯದರ್ಶಿ ಬಿ.ಕೆ ಅನಿಲ್ ಶೆಟ್ಟಿ, ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರುಗಳಾದ ಮೇಕೇರಿರ ಅರುಣ್, ಅಜ್ಜಿನಿಕಂಡ ರಘು ಕರುಂಬಯ್ಯ, ಸತೀಶ್, ಗ್ರಾ.ಪಂ ಉಪಾಧ್ಯಕ್ಷೆ ಗಾಯತ್ರಿ, ಪಿ.ಡಿ.ಓ ರಾಜನ್, ಡಾ. ಎ.ಸಿ ಗಣಪತಿ ಹಾಗೂ ಆದಿವಾಸಿಗಳು ಹಾಜರಿದ್ದರು.