ಮಡಿಕೇರಿ, ಡಿ. 15: ವಿವಾದಾತ್ಮಕವಾಗಿದ್ದು ಜನತೆಗೆ ಸಂಕಷ್ಟ ತಂದೊಡ್ಡಲಿರುವ ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನಗೊಳಿಸುವುದನ್ನು ವಿರೋಧಿಸಿ ಹಾಸನ ಜಿಲ್ಲೆಯ ಕೆಲವು ಗ್ರಾ.ಪಂ.ಗಳಲ್ಲಿ ಈ ಬಾರಿಯ ಚುನಾವಣೆಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಇದಲ್ಲದೆ ಕೆಲವು ಪಂಚಾಯಿತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದರೂ ಇದೀಗ ಸಾಮೂಹಿಕವಾಗಿ ಹಿಂತೆಗೆದುಕೊಂಡಿರುವ ಬೆಳವಣಿಗೆಯು ನಡೆದಿದ್ದು, ಚಿಕ್ಕಮಂಗಳೂರಿನಲ್ಲೂ ಪ್ರತಿಭಟನಾತ್ಮಕ ನಿಲುವು ಗ್ರಾ.ಪಂ. ಚುನಾವಣೆಗೆ ಸಂಬಂಧಿಸಿದಂತೆ ವ್ಯಕ್ತಗೊಂಡಿದೆ. ಈ ಜಿಲ್ಲೆಗಳಂತೆ ಕೊಡಗು ಕೂಡ ಮಲೆನಾಡು ಜಿಲ್ಲೆಯಾಗಿದ್ದು, ಇಲ್ಲಿಯೂ ಕಸ್ತೂರಿರಂಗನ್ ವರದಿ ಅನುಷ್ಠಾನದಿಂದ ಸಮಸ್ಯೆಯಾಗಲಿರುವುದರಿಂದ ಹಾಸನ-ಚಿಕ್ಕಮಂಗಳೂರಿನ ಹಲವು ಗ್ರಾ.ಪಂ.ಗಳಲ್ಲಿ ಕೈಗೊಂಡಿರುವ ನಿರ್ಧಾರದಂತೆ ಚುನಾವಣೆ ವಿರೋಧಿಸುವ ಕುರಿತಾದ ಹೊಸ ಚರ್ಚೆಯೊಂದು ಕೇಳಿ ಬಂದಿದೆ.ಈ ಹಿಂದೆ ಕೊಡಗಿನಲ್ಲಿ ಪಕ್ಷಾತೀತವಾಗಿ ಹೋರಾಟ ಸಮಿತಿಯೊಂದನ್ನು ರಚಿಸಿ ಈ ಬಗ್ಗೆ ಸಾರ್ವತ್ರಿಕವಾಗಿ ಹಲವಾರು ಹೋರಾಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲ ಪುಟದಿಂದ) ಆದರೂ ಇದೀಗ ಈ ವರದಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿರುವುದರಿಂದ ಹಾಸನ-ಚಿಕ್ಕಮಂಗಳೂರಿನಂತೆ ಜಿಲ್ಲೆಯಲ್ಲಿಯೂ ಎಲ್ಲಾ ಪಕ್ಷದವರು ಗ್ರಾ.ಪಂ. ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದನ್ನು ಸ್ಥಗಿತಗೊಳಿಸಿ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಹೇಳಿರುವ ಜಿಲ್ಲಾ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಜಿ.ಪಂ. ಸದಸ್ಯ ಶಿವು ಮಾದಪ್ಪ ಈಗಲೇ ಇದರ ವಿರುದ್ಧವಾಗಿ ಹೋರಾಟಕ್ಕೆ ಸಿದ್ಧವಾಗಬೇಕಿದೆ ಎಂದಿದ್ದಾರೆ. ಒಂದು ವೇಳೆ ಚುನಾವಣೆಯನ್ನು ವಿರೋಧಿಸುವ ಚಿಂತನೆಗೆ ಎಲ್ಲರೂ ಮುಂದಾದಲ್ಲಿ ತಾವು ಜಿ.ಪಂ. ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲೂ ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ.
ಹಾಸನದ ಸಕಲೇಶಪುರ ಮತ್ತಿತರ ಕಡೆಯಲ್ಲಿ ಚುನಾವಣೆ ವಿರೋಧ ವ್ಯಕ್ತಪಡಿಸಿರುವ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಜನರ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಿಲ್ಲ. ಧ್ವನಿ ವರ್ಧಕದ ಮೂಲಕವೂ ಈ ಬಗ್ಗೆ ಮನವಿ ಮಾಡಲಾಗಿತ್ತು. ಇದೀಗ ಅಲ್ಲಿನ ಜಿಲ್ಲಾಡಳಿತ ಈ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದು, ಆಯೋಗ ಯಾವ ನಿಲುವು ವ್ಯಕ್ತಪಡಿಸಲಿದೆ ಎಂದು ಕಾಯಬೇಕಾಗಿದೆ.
ಕೊಡಗಿನಲ್ಲೂ ಕಸ್ತೂರಿರಂಗನ್ ವರದಿ ವಿರುದ್ಧದ ನಿಲುವುÅ ಇರುವುದರಿಂದ ಈಗಲೇ ಈ ಕುರಿತಾಗಿ ನಿರ್ಧಾರಕ್ಕೆ ತ್ವರಿತವಾಗಿ ಬರಬೇಕಾಗಿದೆ ಎಂಬ ಅಭಿಪ್ರಾಯ ಶಿವು ಅವರದ್ದಾಗಿದೆ.