ಗೋಣಿಕೊಪ್ಪ ವರದಿ, ಡಿ. 15: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆರಂಭಗೊಂಡಿರುವ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ದಿನದ ಪಂದ್ಯಗಳಲ್ಲಿ 3 ತಂಡಗಳು ಗೆಲುವಿನ ನಗೆ ಬೀರಿದ್ದು, 1 ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯ ಕಂಡಿದೆ.
ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಕಮಿಟಿ, ಹಾಕಿ ಕರ್ನಾಟಕ ಮತ್ತು ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಮೊದಲ ದಿನದ ಪಂದ್ಯಗಳಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್, ಜೀಯಣ್ಣ ಗ್ರೂಪ್, ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ ತಂಡಗಳಿಗೆ ಗೆಲುವು ದಕ್ಕಿತು.
ಪವಿನ್ ಪೊನ್ನಣ್ಣ ಫೌಂಡೇಷನ್ ತಂಡವು ಗೋರ್ಸ್ ವಿರುದ್ಧ 1-0 ಗೋಲುಗಳ ರೋಚಕ ಗೆಲುವು ದಾಖಲಿಸಿತು. ಪಂದ್ಯದ 50ನೇ ನಿಮಿಷದಲ್ಲಿ ಸಫನ್ ಅಯ್ಯಪ್ಪ ಬಾರಿಸಿದ ಏಕೈಕ ಗೋಲು ಗೆಲುವು ತಂದು ಕೊಟ್ಟಿತು. ಉಭಯ ತಂಡಗಳು ಗೋಲು ದಾಖಲಿಸಲು ಪರದಾಡಿದವು.
ಜೀಯಣ್ಣ ಗ್ರೂಪ್ ತಂಡ ಸೌತ್ ಕೂರ್ಗ್ ಕ್ಲಬ್ ತಂಡವನ್ನು 3-2 ಗೋಲುಗಳಿಂದ ಮಣಿಸಿತು. ಜೀಯಣ್ಣ ಗ್ರೂಪ್ ಪರ 6 ಮತ್ತು 28ರಲ್ಲಿ ಯಶ್ವಂತ್ 2 ಗೋಲು, 59 ನೇ ನಿಮಿಷದಲ್ಲಿ ಗ್ಯಾನ್, ಸೌತ್ಕೂರ್ಗ್ ಕ್ಲಬ್ ತಂಡದ 10 ಹಾಗೂ 25 ನಿಮಿಷದಲ್ಲಿ ಯಶ್ವಿನ್ 2 ಗೋಲು ಹೊಡೆದರು.
ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ ತಂಡವು ಗೋರ್ಸ್ ವಿರುದ್ಧ 5-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು. ಪ್ರಗತಿ ತಂಡಕ್ಕೆ 16, 35ನೇ ನಿಮಿಷದಲ್ಲಿ ಬಿ.ಪಿ. ಸೋಮಣ್ಣ, 25, 40 ರಲ್ಲಿ ಸಿ. ಬಿ ಪೂವಣ್ಣ ತಲಾ 2 ಗೋಲು ಹೊಡೆದು ಮಿಂಚಿದರು. 28ರಲ್ಲಿ ಅದ್ವೈತ್ 1 ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು.
ಪವಿನ್ ಪೊನ್ನಣ್ಣ ಫೌಂಡೇಷನ್ ಹಾಗೂ ಸೌತ್ಕೂರ್ಗ್ ಕ್ಲಬ್ ತಂಡಗಳ ನಡುವಿನ ಪಂದ್ಯ 3-3 ಗೋಲುಗಳ ರೋಚಕ ಡ್ರಾ ಫಲಿತಾಂಶ ನೀಡಿತು. ಪಿಪಿಎಫ್ ತಂಡದ ಪಳಂಗಪ್ಪ 10, 53ನೇ ನಿಮಿಷಗಳಲ್ಲಿ 2 ಗೋಲು, 31ರಲ್ಲಿ ಆಶಿಕ್ ಉತ್ತಪ್ಪ, ಸೌತ್ಕೂರ್ಗ್ ತಂಡದ ಗೌತಮ್ 40 ಮತ್ತು 50ರಲ್ಲಿ 2 ಗೋಲು, ಯಶ್ವಿನ್ 59ನೇ ನಿಮಿಷದಲ್ಲಿ ಗೋಲು ಬಾರಿಸಿದರು.
ಬೆಳ್ಳಿ ನಾಣ್ಯ: ಪಂದ್ಯ ಪುರುಷ ಆಟಗಾರರಿಗೆ ಮುಳಿಯ ಜ್ಯುವೆಲ್ಸ್ನ ಬೆಳ್ಳಿ ನಾಣ್ಯವನ್ನು ಬಹುಮಾನವಾಗಿ ನೀಡಲಾಯಿತು. ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ ತಂಡದ ಸೋಮಣ್ಣ, ಜೀಯಣ್ಣ ತಂಡದ ಯಶ್ವಂತ್, ಪವಿನ್ ಪೊನ್ನಣ್ಣ ಫೌಂಡೇಷನ್ ತಂಡದ ಮೋಹಿತ್ಗೌಡ, ಪವಿನ್ ಪೊನ್ನಣ್ಣ ಫೌಂಡೇಷನ್ ತಂಡದ ಸಪನ್ ಅಯ್ಯಪ್ಪ ಬಹುಮಾನ ಸ್ವೀಕರಿಸಿದರು. ತಾಂತ್ರಿಕ ವರ್ಗದಲ್ಲಿ ನೆಲ್ಲಮಕ್ಕಡ ಪವನ್, ಚೆಯ್ಯಂಡ ಅಪ್ಪಚ್ಚು, ಕೊಕ್ಕಂಡ ರೋಶನ್, ಕೊಂಡೀರ ಕೀರ್ತಿ, ಕುಪ್ಪಂಡ ದಿಲನ್, ಕುಮ್ಮಂಡ ಬೋಸು, ಗಣಪತಿ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಅರುಣ್, ದೀಕ್ಷಿತ್ ಕಾರ್ಯನಿರ್ವಹಿಸಿದರು. ಸುಳ್ಳಿಮಾಡ ಸುಬ್ಬಯ್ಯ ವೀಕ್ಷಕ ವಿವರಣೆ ನೀಡಿದರು.
ಉದ್ಘಾಟನೆ: ಕೋರಲ್ ವಾಟರ್ಸ್ ನಿರ್ದೇಶಕ ಕೃಷ್ಣ ಮೈಲಾವರ್ಪು ಟೂರ್ನಿ ಉದ್ಘಾಟಿಸಿದರು. ಈ ಸಂಧರ್ಭ ಹಾಕಿ ಕೂರ್ಗ್ ಪ್ರ. ಕಾರ್ಯದರ್ಶಿ ಬುಟ್ಟಿಯಂಡ ಚೆಂಗಪ್ಪ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಗೋರ್ಸ್ ತಂಡದ ಮಾಲೀಕ ಗುಮ್ಮಟ್ಟೀರ ಮುತ್ತಣ್ಣ, ಪ್ರಗತಿ ಮಾಲೀಕ ಮಾದಂಡ ತಿಮ್ಮಯ್ಯ, ಸಿಎಚ್ಪಿಎಲ್ ಕಮಿಟಿ ಸದಸ್ಯರಾದ ಮೂಕಚಂಡ ನಾಚಪ್ಪ, ಕುಪ್ಪಂಡ ದಿಲನ್ ಬೋಪಣ್ಣ, ಇದ್ದರು.