ರಣಾಂಗಣವಾದ ವಿಧಾನ ಪರಿಷತ್
ಬೆಂಗಳೂರು, ಡಿ. 15: ವಿಧಾನ ಪರಿಷತ್ ಇಂದು ಅಕ್ಷರಶಃ ರಣಾಂಗಣವಾಗಿದ್ದು, ಸಭಾಪತಿ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಗ್ಯುದ್ಧ, ಕೈ-ಕೈ ಮಿಲಾಯಿಸುವಿಕೆ, ನೂಕಾಟ, ತಳ್ಳಾಟಕ್ಕೆ ಸಾಕ್ಷಿಯಾಯಿತು. ಬೆಳಿಗ್ಗೆ 11.10 ರ ಸುಮಾರಿಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಸ್ಥಾನದಲ್ಲಿ ಉಪ ಸಭಾಪತಿ ಜೆಡಿಎಸ್ನ ಧರ್ಮೇಗೌಡ ಕುಳಿತಿದ್ದದನ್ನು ಕಂಡು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಅವರನ್ನು ಎಬ್ಬಿಸಿ ಎಳೆದೊಯ್ದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಬಿಜೆಪಿ ಸದಸ್ಯರು ಮತ್ತೆ ಅವರನ್ನು ಕರೆತಂದರು. ಈ ವೇಳೆ ಕಾಂಗ್ರೆಸ್ ಸದಸ್ಯ ಬಸವರಾಜ ಪಾಟೀಲ ಇಟಗಿ ಅವರನ್ನು ಸಭಾಪತಿ ಪೀಠದಲ್ಲಿ ಕಾಂಗ್ರೆಸ್ ಸದಸ್ಯರು ಕುಳ್ಳಿರಿಸಿ ಅವರ ಸುತ್ತಲೂ ನಿಂತುಕೊಂಡರು. ಸಭಾಪತಿ ವಿರುದ್ಧ ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಸೂಚನೆಯ ಬಗ್ಗೆ ಮೊದಲು ಪ್ರಸ್ತಾಪವಾಗಬೇಕು ಎಂದು ಜೆಡಿಎಸ್-ಬಿಜೆಪಿ ಸದಸ್ಯರು ಒತ್ತಾಯಿಸಿ ಘೋಷಣೆ ಕೂಗಿದರು. ಕಡಿಮೆ ಸಂಖ್ಯೆಯಲ್ಲಿದ್ದ ಮಾರ್ಷಲ್ ಗಳಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪಕ್ಕೆ ಆಗಮಿಸಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಚಿಂತಕರ ಚಾವಡಿಯಾಗಿದ್ದ ಮೇಲ್ಮನೆಯಲ್ಲಿ ಮೊದಲ ಬಾರಿಗೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೈಕೈಮಿಲಾಯಿಸುವಿಕೆ, ನೂಕಾಟ ತಳ್ಳಾಟಕ್ಕೆ ಕಾರಣವಾಗಿ ಸಭಾಪತಿ ಪೀಠದ ಮೇಲೆ ಏರಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.
ವಿದ್ಯಾಗಮಕ್ಕೆ ಹೊಸ ರೂಪ-ಸುರೇಶ್ಕುಮಾರ್
ಬೆಂಗಳೂರು, ಡಿ. 15: ಕೋವಿಡ್ ಸಾಂಕ್ರಾಮಿಕದಿಂದಾಗಿ ಶಾಲಾರಂಭ ತಡವಾದ ಹಿನ್ನೆಲೆಯಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದ್ದ ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುಧಾರಿತ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೀತಿಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ತಿಳಿಸಿದ್ದಾರೆ. ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ವಿದ್ಯಾಗಮವನ್ನು ಉಚ್ಚ ನ್ಯಾಯಾಲಯದ ಅಪೇಕ್ಷೆಯನುಸಾರ ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೂಪದಲ್ಲಿ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದ್ದು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ.
ಪಿತೂರಿಯಿಂದ ರೈತರ ದಾರಿ ತಪ್ಪಿಸಲಾಗಿದೆ
ಅಹ್ಮದಾಬಾದ್, ಡಿ. 15: ಕೇಂದ್ರ ಸರ್ಕಾರದ ವಿರುದ್ಧದ ಯೋಜಿತ ಪಿತೂರಿಯ ಭಾಗವಾಗಿ ಪ್ರತಿಭಟನಾ ನಿರತ ರೈತರನ್ನು ದಾರಿ ತಪ್ಪಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತವರು ಗುಜರಾತ್ನ ಕಚ್ನಲ್ಲಿ ಹಲವು ಅಭಿವದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಹಾಲಿನ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಘಟಕ, ಡಸಲೀಕರಣ ಘಟಕ, ಹೈಬ್ರಿಡ್ ನವೀಕರಿಸಬಹುದಾದ ಇಂಧನ ಪಾರ್ಕ್ ನಿರ್ಮಾಣಕ್ಕೆ ಶುಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ರೈತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ವರ್ಷಗಳಿಂದ ಕೇಳುತ್ತಿದ್ದ ಬೇಡಿಕೆಗಳನ್ನೇ ಕೃಷಿ ಕಾಯ್ದೆಗಳ ತಿದ್ದುಪಡಿಗಳು ಒಳಗೊಂಡಿವೆ ಎಂದು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು. ಭಾರತ ಸರ್ಕಾರವು ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ಅವರ ಕಳಕಳಿಗೆ ಸರ್ಕಾರ ಓಗೊಡಲಿದೆ. ಕೇಂದ್ರ ಸರ್ಕಾರದ ವಿರುದ್ಧದ ಯೋಜಿತ ಪಿತೂರಿಯ ಭಾಗವಾಗಿ ಪ್ರತಿಭಟನಾ ನಿರತ ರೈತರನ್ನು ದಾರಿ ತಪ್ಪಿಸಲಾಗುತ್ತಿದೆ. ವಿರೋಧ ಪಕ್ಷಗಳಲ್ಲಿ ಕುಳಿತಿರುವವರು ಹಾಗೂ ಇಂದು ರೈತರ ಹಾದಿ ತಪ್ಪಿಸುತ್ತಿರುವವರು, ಅವರ ಆಡಳಿತಾವಧಿಯಲ್ಲಿ ಈ ಕೃಷಿ ಕಾಯ್ದೆ ತಿದ್ದುಪಡಿಗಳ ಕಡೆಗೆ ಒಲವು ತೋರಿದ್ದರು. ಆಗಿನ ಸರ್ಕಾರ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈಗ ದೇಶವು ಐತಿಹಾಸಿಕ ಹೆಜ್ಜೆ ಇಟ್ಟಿರುವ ಸಮಯದಲ್ಲಿ ಅದೇ ಜನರು ರೈತರ ಹಾದಿ ತಪ್ಪಿಸುತ್ತಿದ್ದಾರೆಂದು ಮೋದಿ ಆರೋಪಿಸಿದ್ದಾರೆ.
ಬ್ರಿಟನ್ ಪ್ರಧಾನಿ ಗಣರಾಜ್ಯ ದಿನದ ಅತಿಥಿ
ನವದೆಹಲಿ, ಡಿ. 15: 2021ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಭಾರತ ನೀಡಿದ್ದ ಆಹ್ವಾನವನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸ್ವೀಕರಿಸಿದ್ದಾರೆ. ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆಗಿನ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ದೃಢಪಡಿಸಿದರು. ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಮಿಸುತ್ತಿರುವುದಾಗಿ ಹೇಳಿದರು. ಜನವರಿಯಲ್ಲಿ ನಡೆಯಲಿರುವ ಭಾರತದ ಗಣರಾಜ್ಯೋತ್ಸವ ದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದು ದೊಡ್ಡ ಗೌರವವಾಗಿದೆ. ಭಾರತದ ಆಹ್ವಾನವನ್ನು ಬ್ರಿಟನ್ ಪ್ರಧಾನಿ ಜಾನ್ಸನ್ ಸ್ವೀಕರಿಸಿದ್ದಾರೆ ಎಂದರು.