ಕೂಡಿಗೆ, ಡಿ. 16: ಕೂಡಿಗೆಯಲ್ಲಿರುವ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ರಾಜ್ಯ ಪಶುಪಾಲನಾ ಇಲಾಖೆಯ ಅದೇಶದಂತೆ ರಾಜ್ಯದಲ್ಲೇ ಪ್ರಥಮವಾಗಿ ನಾಟಿ ಕೋಳಿ ಸಾಕಾಣಿಕೆ ಯೋಜನೆ ಇದೀಗ ಅರಂಭಗೊಂಡಿದೆಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸೂಚನೆಯಂತೆ ನಾಟಿ ಕೋಳಿ ಅಭಿವೃದ್ಧಿ ಪಡಿಸುವ ಚಿಂತನೆಯನ್ನು ಇಲಾಖೆಯು ಹೊಂದಿದ್ದು ಅದರ ಅನುಗುಣವಾಗಿ ಕಾರ್ಯವನ್ನು ನಿರ್ವಹಿಸಲು ಇಲ್ಲಿನ ಅಧಿಕಾರಿ ವರ್ಗ ಸಿದ್ಧವಾಗಿದೆ. ಈ ಕೇಂದ್ರದಲ್ಲಿ ಕಳೆದ ಅನೇಕ ವರ್ಷಗಳಿಂದ ಗಿರಿರಾಜ ಕೋಳಿಗಳನ್ನು ಸಾಕಿ ಅದರ ಮರಿಗಳನ್ನು ರೈತರಿಗೆ ಸರಕಾರ ನಿಗದಿ ಮಾಡಿದ ದರದಲ್ಲಿ ವಿತರಣೆ ಮಾಡಲಾಗುತ್ತಿತ್ತು. ಈ ಕೇಂದ್ರವು ಇದುವರೆಗೂ ಜಿಲ್ಲಾ ಪಂಚಾಯತ್ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತ್ತಿದೆ.
ಇದೀಗ ರಾಜ್ಯ ವಲಯದಿಂದ ನಾಟಿ ಕೋಳಿ ಸಾಕಾಣಿಕೆಯ ಮೂಲಕ ದೇಶಿಯ ಕೋಳಿ ಸಾಕಾಣಿಕೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರ ಹೊಸ ಚಿಂತನೆ ನಡೆಸಿದ್ದು ಅದರಂತೆ ಕೋಳಿ ಸಾಕಾಣಿಕೆ ಕೇಂದ್ರದ ಅಧಿಕಾರಿ ವರ್ಗ ನಾಟಿ ಕೋಳಿ ಸಾಕಾಣಿಕೆ ಮಾಡುವ ಕೆಲಸವನ್ನು ಆರಂಭಿಸಿದೆ. ಕೂಡಿಗೆ ಸಾಕಾಣಿಕೆ ಕೇಂದ್ರದ ಪಶುವೈದ್ಯರು ಈಗಾಗಲೇ ಖಾಸಗಿ ಕೋಳಿ ಸಾಕಾಣಿಕೆ
(ಮೊದಲ ಪುಟದಿಂದ) ಕೇಂದ್ರದಿಂದ 500 ಕ್ಕೂ ಹೆಚ್ಚು ನಾಟಿ ಕೋಳಿ ಮೊಟ್ಟೆಗಳನ್ನು ತಂದು ಅದರಿಂದಾಗುವ ಮರಿಗಳನ್ನು ಸಾಕಾಣಿಕೆ ಮಾಡುವುದರಲ್ಲಿ ತೊಡಗಿದ್ದಾರೆ. ಜಿಲ್ಲೆಯ ರೈತರ ಬೇಡಿಕೆಯ ಅನುಗುಣವಾಗಿ ಗಿರಿರಾಜ ಕೋಳಿ ಮರಿಗಳಂತೆ ನಾಟಿ ಕೋಳಿ ಮರಿಗಳನ್ನು ಸರಕಾರ ನಿಗದಿಪಡಿಸಿದ ಶುಲ್ಕ ತೆಗೆದುಕೊಂಡು ವಿತರಣೆ ಮಾಡಲಾಗುವುದು ಎಂದು ಕೋಳಿ ಸಾಕಾಣಿಕೆ ಕೇಂದ್ರದ ವೈದ್ಯರಾದ ಸಜಿವ್ ಕುಮಾರ್ ಆರ್ ಶಂಡೆ ತಿಳಿಸಿದ್ದಾರೆ.
ಈಗಾಗಲೇ ಗಿರಿರಾಜ ಕೋಳಿ ಮರಿಗಳಿಗೆ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಮೊದಲು ಕಾದಿರಿಸಿದ ರೈತರಿಗೆ ನಿಯಮನುಸಾರವಾಗಿ ವಿತರಣೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ನಾಟಿ ಕೋಳಿ ಮರಿಗಳನ್ನು ಇದೇ ರೀತಿಯಲ್ಲಿ ವಿತರಣೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. -ಕೆ.ಕೆ.ಎನ್.