ಶ್ರೀಮಂಗಲ, ಡಿ. 16: ಜಿಲ್ಲಾ ಸಾರ್ವಜನಿಕ ಹಿತರಕ್ಷಣ ಸಮಿತಿಯ ಸಲಹೆಗಾರ ಮತ್ತು ಕೊಡಗು ಬೆಳೆಗಾರ ಒಕ್ಕೂಟದ ಬಾಳೆಲೆ ಹೋಬಳಿಯ ಮಾಜಿ ಅಧ್ಯಕ್ಷ ಪೋಡಮಾಡ ಉತ್ತಪ್ಪ ಅವರ ಮೇಲೆ ಬಾಳೆಲೆಯ ಕೆಲವು ಯುವಕರು ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಉತ್ತಪ್ಪ ಅವರ ಮೇಲೆ ಹಲ್ಲೆ ನಡೆಸಿದ ಯುವಕರನ್ನು ಕೂಡಲೇ ಕೊಲೆ ಆರೋಪದ ಮೊಕದ್ದಮೆ ದಾಖಲಿಸಿ ಬಂಧಿಸಬೇಕೆಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣ ಸಮಿತಿ ಮತ್ತು ಕೊಡಗು ಬೆಳೆಗಾರ ಒಕ್ಕೂಟ ತುರ್ತು ಸಭೆಯಲ್ಲಿ ಆಗ್ರಹಿಸಿದೆ. ಜಿಲ್ಲಾ ಸಾರ್ವಜನಿಕ ಹಿತರಕ್ಷಣ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್‍ದೇವಯ್ಯ, ಕೊಡಗು ಜಿಲ್ಲಾ ಬೆಳೆಗಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್‍ಮಾದಪ್ಪ, ಖಜಾಂಚಿ ಮಾಣೀರ ವಿಜಯ್‍ನಂಜಪ್ಪ ಅವರು ಬಾಳೆಲೆ ಗ್ರಾಮ ಪಂಚಾಯಿತಿಯ ದೇವನೂರು ಗ್ರಾಮದಲ್ಲಿ ಉತ್ತಪ್ಪ ಅವರ ಅಂತ್ಯಕ್ರಿಯೆಗೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಉತ್ತಪ್ಪ ಅವರು ದೂರು ಸಲ್ಲಿಸಿದ ನಂತರ ಹಲ್ಲೆ ಮಾಡಿದ ಯುವಕರು ಜಾತಿ ನಿಂದನೆ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಉತ್ತಪ್ಪ ಹಾಗೂ ಉತ್ತಪ್ಪ ಅವರ ಜೊತೆಯಲ್ಲಿದ್ದ ಮಚ್ಚಮಾಡ ಕಾಶಿಮಾಚಯ್ಯ ಅವರ ಮೇಲೆ ಕೇಸು ದಾಖಲಿಸಿದ್ದಾರೆ ಎಂದು ದೂರಿದ ಅವರು, ಯುವಕರನ್ನು ಬಂಧಿಸದಿದ್ದಲ್ಲಿ ಸಂಘಟನೆಯಿಂದ ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ಹೋರಾಟ ನಡೆಸಲು ಕರೆ ನೀಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್‍ಗೆ ಸಂಘಟನೆಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.