ವೀರಾಜಪೇಟೆ, ಡಿ. 16: ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಮುಂದಿನ 30 ವರ್ಷಗಳ ಅವಧಿಯಲ್ಲಿ ಯೋಜನೆಯ ಸ್ಥಿರತೆಯನ್ನು 2050ರವರೆಗೆ ಕಾಪಾಡಿಕೊಂಡು ಇಲ್ಲಿನ ಪಟ್ಟಣದ ನಾಗರಿಕರಿಗೆ ಬೇಡಿಕೆಗನುಗುಣವಾಗಿ ನಿರಂತರವಾಗಿ ಬೇತ್ರಿ ಗ್ರಾಮದ ಕಾವೇರಿ ನೀರನ್ನು ಪೊರೈಸ ಲಾಗುವುದು ಎಂದು ಮಡಿಕೇರಿ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ನಿರ್ದೇಶಕ ಅಜಯ್ ಸಭೆಯಲ್ಲಿ ಪ್ರಸ್ತಾಪಿಸಿ ಡಿ.ಪಿ.ಆರ್.ಗಾಗಿ (ಡಿಪಾರ್ಟ್‍ಮೆಂಟ್ ಪ್ರಾಜೆಕ್ಟ್ ರಿಪೋರ್ಟ್) ರೂ. 8.62 ಲಕ್ಷ ತಕ್ಷಣ ಠೇವಣಿ ಇಡುವಂತೆ ನಿರ್ದೇಶನ ನೀಡಿದರು.
ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆ ನಿರಂತರ ಸಮಸ್ಯೆ ಆಗಿರುವುದರಿಂದ ಈ ಯೋಜನೆಯಿಂದ ಪಟ್ಟಣ ಪಂಚಾಯಿತಿ ಶಾಶ್ವತವಾಗಿ ಪರಿಹಾರ ಕಾಣಲಿರುವುದರಿಂದ ಈ ಯೋಜನೆಯ ಕಾರ್ಯಗತಕ್ಕೆ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳು ನಿನ್ನೆ ನಡೆದ ಸಭೆಯಲ್ಲಿ ಒಮ್ಮತದಿಂದ ಅಂಗೀಕಾರ ನೀಡಿದರು.ಇದೇ ಸಂದರ್ಭ ಪಟ್ಟಣ ಪಂಚಾಯಿತಿಯ ನಲ್ಲಿ ನೀರು ಪೂರೈಕೆ ವಿಭಾಗದ ಅಭಿಯಂತರ ಎನ್.ಎಂ. ಹೇಮ್‍ಕುಮಾರ್ ಅವರು ಮಾತನಾಡಿ, ಈಗ ವೀರಾಜಪೇಟೆಗೆ ಕಾವೇರಿ ಹೊಳೆಯಿಂದ ಪ್ರತಿದಿನ 25000 ಲೀಟರ್‍ನಷ್ಟು ನೀರಿನ ಬೇಡಿಕೆ ಇದ್ದರೂ ಸರಾಸರಿ ಸುಮಾರು 14 ಲಕ್ಷ ಲೀಟರ್‍ಗಳಷ್ಟು ನಲ್ಲಿ ನೀರು ಪೊರೈಕೆಯಾಗುತ್ತಿದೆ. ಈ ನೀರು ಪಟ್ಟಣ ಬಳಕೆದಾರರಿಗೆ ಏನೇನು ಸಾಲದು. ರೂ 33 ಕೋಟಿ ವೆಚ್ಚದ ಹೊಸ ಯೋಜನೆಯಲ್ಲಿ ವೀರಾಜಪೇಟೆ ಪಟ್ಟಣಕ್ಕೆ ಪ್ರತಿ ದಿನ ಸರಾಸರಿ 45ಲಕ್ಷ ಲೀಟರ್‍ನಷ್ಟು ನಲ್ಲಿ ನೀರು ಪೂರೈಕೆಯಾಗಲಿದೆ. ಇದೊಂದು ವೀರಾಜಪೇಟೆಗೆ ಆಧುನಿಕ ಸೌಲಭ್ಯದ ಯೋಜನೆಯಾಗಿದೆ. ಈ ಯೋಜನೆಯಿಂದ ಎಲ್ಲ ಹಂತದಲ್ಲಿಯೂ ಆಧುನಿಕ ಯಂತ್ರಗಳ ಬಳಕೆ, ಅಗತ್ಯ ಗಾತ್ರದ ಪೈಪುಗಳ ಬಳಕೆಯಾಗಲಿದೆ ಎಂದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮೊದಲ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ಟಿ.ಆರ್.ಸುಶ್ಮಿತಾ ವಹಿಸಿದ್ದರು.
ಬೆಟ್ಟದಲ್ಲಿ ಬಟರ್‍ಫ್ಲೈ ಪಾರ್ಕ್
ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ಪಟ್ಟಣದ ಸುತ್ತಮುತ್ತಲಿನ ಜಾಗವನ್ನು ಸೂಕ್ಷ್ಮವಾಗಿ ವೀಕ್ಷಿಸುವ ಆಯ್ದ ವಿ.ಪಾಯಿಂಟ್
(ಮೊದಲ ಪುಟದಿಂದ) ಜಾಗದಲ್ಲಿ ಸುಮಾರು ಎರಡೂವರೆ ಕೋಟಿ ವೆಚ್ಚದಲ್ಲಿ ಬಟರ್‍ಫ್ಲೈ ಹಾಗೂ ಲೇಕ್ ಪಾರ್ಕ್‍ನ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿ ಸಭೆಯು ಅಂಗೀಕಾರ ನೀಡಿತು. ಇದೇ ಸಂದರ್ಭ ಪ್ರವಾಸೋದ್ಯಮ ಇಲಾಖೆಯ ಏಜೆನ್ಸಿ ಅಧಿಕಾರಿ ಪ್ರಮೋದ್ ಮಾತನಾಡಿ ಮಲೆತಿರಿಕೆಬೆಟ್ಟದಲ್ಲಿ ಪಾರ್ಕ್‍ಗಳ ನಿರ್ಮಾಣದ ಜಾಗವನ್ನು ಪರಿಶೀಲಿಸಿ ಕ್ರಿಯಾ ಯೋಜನೆಯನ್ನು ಈ ಹಿಂದೆ ತಯಾರಿಸಲಾಗಿದೆ. ಈ ಯೋಜನೆಯ ಕಾಮಗಾರಿಯನ್ನು ಸದÀ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಒತ್ತುವರಿ ತೆರವಿಗೆ ಕ್ರಮ :ವೀರಾಜಪೇಟೆ ಪಟ್ಟಣದ ನೆಹರೂನಗರದ ಗಡಿ ಭಾಗದ ಒತ್ತಿನಿಂದ ಮೊಗರಗಲ್ಲಿಯ ಒಳ ಮಾರ್ಗವಾಗಿ ಮಾಂಸ ಮಾರುಕಟ್ಟೆಯ ತನಕ ಹಾದು ಹೋಗಿರುವ ರಾಜಾ ಕಾಲುವೆಯ ನೂರಾರು ಎಕರೆ ಜಾಗವನ್ನು ಸಾರ್ವಜನಿಕರು ಅತಿಕ್ರಮಿಸಿದ್ದಾರೆ. ಇದನ್ನು ತೆರವು ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸದಸ್ಯರುಗಳು ಕೆಲವರು ಆಗ್ರಹಿಸಿದರು. ಮೊದಲು ಜಾಗ ಅತಿಕ್ರಮಣಗಾರರಿಗೆ ನೋಟೀಸ್ ಜಾರಿ ಮಾಡಿ ನಂತರ ತೆರವು ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದರು.
ಕುಡಿಯುವ ನೀರು, ಪಾರ್ಕ್‍ಗಳ ಯೋಜನೆ ಹಾಗೂ ಟೌನ್ ಪ್ಲಾನಿಂಗ್ ಕಡತ ವಿಲೇವಾರಿಗೆ ಸಂಬಂಧಿಸಿದ ವಿಚಾರ ವಿನಿಮಯದಲ್ಲಿ ಮಹಮ್ಮದ್ ರಾಫಿ, ಪಟ್ಟಡ ರಂಜಿ ಪೂಣಚ್ಚ, ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ, ಎಸ್.ಎಚ್. ಮತೀನ್, ಇ.ಸಿ. ಜೀವನ್, ಡಿ.ಪಿ. ರಾಜೇಶ್, ಇ.ಸಿ. ಜೀವನ್, ಕೆ. ಸಚಿನ್ ಮತ್ತಿತರರು ಭಾಗವಹಿಸಿದ್ದರು.
ಸಭೆಯಲ್ಲಿ ಉಪಾಧ್ಯಕ್ಷ ಕೆ.ಬಿ. ಹರ್ಷವರ್ಧನ್, ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.