*ಸಿದ್ದಾಪುರ, ಡಿ. 15: ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಸೂಚಕರಾಗಿ ಸಹಿ ಮಾಡಿದ್ದ ವ್ಯಕ್ತಿಯೇ ಅಂತಿಮವಾಗಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದಿಢೀರ್ ಬೆಳವಣಿಗೆ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ.ನ ಅಭ್ಯತ್‍ಮಂಗಲ ಗ್ರಾಮದ ಎರಡನೇ ವಾರ್ಡ್‍ನಲ್ಲಿ ನಡೆದಿದೆ.
ವಾರ್ಡ್ ಸಂಖ್ಯೆ 2 ಕ್ಕೆ ಗ್ರಾ.ಪಂ. ಮಾಜಿ ಸದಸ್ಯ, ಬಿಜೆಪಿ ಬೆಂಬಲಿತ ಎ.ಎನ್. ಸುಧಿಕುಮಾರ್ ಅವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇವರಿಗೆ ಸೂಚಕರಾಗಿ ಜನಾರ್ಧನ ಎಂಬವರು ಸಹಿ ಮಾಡಿದ್ದು, ನಾಮಪತ್ರ ವಾಪಾಸ್ಸು ಪಡೆಯುವ ಕೊನೆದಿನ ಜನಾರ್ಧನ ಅವರು ಸುಧಿಕುಮಾರ್ ಅವರ ನಾಮಪತ್ರ ವಾಪಾಸ್ ಪಡೆಯಲು ಅಧಿಕಾರಿಗಳ ಬಳಿಗೆ ತೆರಳಿದ್ದಾರೆ. ಈ ಸಂದರ್ಭ ಅಧಿಕಾರಿಗಳು ಸುಧಿಕುಮಾರ್ ಅವರಿಗೆ ಮೊಬೈಲ್ ಕರೆ ಮಾಡಿ ನಿಮ್ಮ ಅನುಮತಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ದಿಢೀರ್ ಬೆಳವಣಿಗೆಯಿಂದ ಆಶ್ಚರ್ಯಗೊಂಡ ಸುಧಿಕುಮಾರ್ ನಾಮಪತ್ರ ವಾಪಾಸ್ ಪಡೆಯವುದಿಲ್ಲವೆಂದು ತಿಳಿಸಿದ್ದಾರೆ. ನಂತರ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ಸ್ಪಷ್ಟನೆ ಬಯಸಿದಾಗ ಅನಾರೋಗ್ಯದ ಕಾರಣ ನೀಡಿ ನಾಮಪತ್ರ ವಾಪಾಸ್ ಪಡೆಯಲು ಜನಾರ್ಧನ ಅವರಿಗೆ ಒತ್ತಡ ಹೇರಿರುವುದಾಗಿ ತಿಳಿದು ಬಂದಿದೆ.
ಅಭ್ಯರ್ಥಿಯ ಅನುಮತಿ ಇಲ್ಲದೆ ನಾಮಪತ್ರ ವಾಪಾಸ್ ಪಡೆದ ಬಗ್ಗೆ ಸುಧಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದರಾದರೂ ಜಿಲ್ಲಾಡಳಿತದ ಮೂಲಕ ಸ್ಪಷ್ಟೀಕರಣ ಪಡೆದ ಅಧಿಕಾರಿಗಳು ಅಭ್ಯರ್ಥಿಗಳ ಗೈರು ಹಾಜರಿಯಲ್ಲಿ ಸೂಚಕರು ನಾಮಪತ್ರ ವಾಪಾಸ್ ಪಡೆಯಬಹುದೆನ್ನುವ ಮಾಹಿತಿ ದೊರೆತಿದೆ. ಇದನ್ನೇ ನೆಪ ಮಾಡಿಕೊಂಡ ಅಧಿಕಾರಿಗಳು ಸುಧಿಕುಮಾರ್ ಅವರ ಅನುಪಸ್ಥಿತಿಯಲ್ಲಿ ನಾಮಪತ್ರವನ್ನು ಜನಾರ್ಧನ ಅವರಿಗೆ ನೀಡಿದ್ದಾರೆ. ಈ ನಡುವೆ ಜನಾರ್ಧನ ತಮ್ಮ ಪಕ್ಷದ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ.