ಶ್ರೀಮಂಗಲ, ಡಿ. 15 : ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನೂರು ಗ್ರಾಮದ ಹಿರಿಯ ಸಮಾಜ ಸೇವಕ, ಕೊಡಗು ಬೆಳೆಗಾರ ಒಕ್ಕೂಟ ಮತ್ತು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯಲ್ಲಿ ಸಕ್ರಿಯರಾಗಿದ್ದ ಪೋಡಮಾಡ ಉತ್ತಪ್ಪ ಅವರು ತಾ. 14ರ ರಾತ್ರಿ ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

ನವೆಂಬರ್ 18 ರಂದು ಬಾಳೆಲೆ ಪಟ್ಟಣದಲ್ಲಿ ಉತ್ತಪ್ಪ ಅವರ ಕಾರನ್ನು ತಡೆದು ಯುವಕರಾದ ಸಂತೋಷ್, ಪ್ರತಾಪ್ ಮತ್ತು ಕಾಮರಾಜ ಅವರು ಹಲ್ಲೆ ನಡೆಸಿದ್ದ ಆರೋಪದ ಮೇಲೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಯಿಂದ ಸ್ಥಳದಲ್ಲಿಯೇ ಬಿದ್ದ ಉತ್ತಪ್ಪ ಅವರ ಪಕ್ಕೆಲುಬು ಹಾಗೂ ಸೊಂಟದ ಹಿಂಬದಿ ಮೂಳೆ ಮುರಿದಿತ್ತು. ಕೂಡಲೇ ಅವರನ್ನು ಮಂಗಳೂರಿನ ತೇಜಸ್ವಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಇದೇ ಸಂದರ್ಭ ಉತ್ತಪ್ಪ ಅವರ ಮೇಲೆ ಯುವಕರಾದ ಸಂತೋಷ್, ಪ್ರತಾಪ್ ಮತ್ತು ಕಾಮರಾಜ ಜಾತಿ ನಿಂದನೆಯ ಆರೋಪದ ಮೇಲೆ ಪ್ರತಿ ದೂರನ್ನು ಪೊನ್ನಂಪೇಟೆ ಠಾಣೆಯಲ್ಲಿ ದಾಖಲಿಸಿದ್ದರು. ಗಂಭೀರ ಗಾಯಗೊಂಡು ಕಳೆದ 25 ದಿನಕ್ಕಿಂತ ಹೆಚ್ಚು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಉತ್ತಪ್ಪ ಅವರನ್ನು ಖುದ್ದಾಗಿ ಪೊನ್ನಂಪೇಟೆ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿ ಹೇಳಿಕೆ ಪಡೆದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉತ್ತಪ್ಪ ಅವರು ನಿನ್ನೆ ನಿಧನರಾದರು.

ಮಂಗಳೂರಿನಲ್ಲಿ ಮೃತರ ಮರಣೋತ್ತರ ಪರೀಕ್ಷೆಯನ್ನು ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಅವರ ಸಮ್ಮುಖದಲ್ಲಿ ವೈದಾಧಿಕಾರಿಗಳು ಮಾಡಿದ್ದು, ಉತ್ತಪ್ಪ ಅವರ ಪುತ್ರ ಪ್ರದೀಪ್ ಕರುಂಬಯ್ಯ ಅವರು ತಮ್ಮ ತಂದೆಯ ಸಾವಿಗೆ ಬಾಳೆಲೆ ಗ್ರಾಮದ ಯುವಕರಾದ ಸಂತೋಷ್, ಪ್ರತಾಪ್ ಮತ್ತು ಕಾಮರಾಜ ಕಾರಣ. ಇದು ಸಹಜ ಸಾವಲ್ಲ, ಇದು ಮಾರಣಾಂತಿಕ ಹಲ್ಲೆಯಿಂದ ಆಗಿರುವ ಕೊಲೆ ಎಂದು ದೂರು ನೀಡಿದ್ದಾರೆ. ತಾ. 16ರಂದು (ಇಂದು) ಸ್ವಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

ಬಾಳೆಲೆ ಗ್ರಾಮದ ಸಾಮಾಜಿಕ ಹೋರಾಟಗಾರ ರೈತ ಮುಖಂಡ ಪೋಡಮಾಡ ಉತ್ತಪ್ಪ (ಉತ್ತು) ಅವರ ಸಾವು ಸಹಜವಲ್ಲ ಇದು ಕೊಲೆಯೆಂದು ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪೋಡಮಾಡ ಉತ್ತಪ್ಪನವರು ನೀಡಿದ ದೂರು ಹಾಗೂ ಪ್ರತ್ಯಕ್ಷದರ್ಶಿಗಳು ಕಂಡಿರುವ ಮಾಹಿತಿಯ ಮೇರೆ ಕಳೆದ ತಿಂಗಳು 18ರಂದು ಸಂಜೆ 4 ಗಂಟೆಗೆ ಬಾಳೆಲೆಯ ಬಾರೊಂದರ ಹತ್ತಿರ ಪೋಡಮಾಡ ಉತ್ತಪ್ಪನವರ ಕಾರಿಗೆ ಅಡ್ಡ ಹಾಕಿದ ಮೂವರು ಯುವಕರು ಉತ್ತಪ್ಪನವರ ಮೇಲೆ ಹಲ್ಲೆ ನಡೆಸಿ ಕೆಳಗೆ ಬಿಳಿಸಿದ್ದಾರೆ. ಈ ಸಂದರ್ಭ ಉತ್ತಪ್ಪನವರ ಜೊತೆಯಲ್ಲಿದ್ದ ಇಬ್ಬರು ಸ್ನೇಹಿತರು ತಡೆದು ಉತ್ತಪ್ಪನ ಮಗನಿಗೆ ಸುದ್ದಿ ಮುಟ್ಟಿಸಿದ್ದರು. ಹಲ್ಲೆಯಿಂದ ತೀವ್ರ ಅಸ್ವಸ್ಥರಾದ ಉತ್ತಪ್ಪರವರನ್ನು ಪ್ರಥಮ ಚಿಕಿತ್ಸೆಯ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 14ರಂದು ನಿಧನರಾಗಿದ್ದು, ಇದನ್ನು ಕೊಲೆ ಎಂದು ಪರಿಗಣಿಸಿ ಕೂಡಲೇ ಆರೋಪಿಗಳನ್ನು ಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿದ್ದಾರೆ.

ಇವರು ಜೀವನ್ಮರಣ ಸ್ಥಿತಿಯಲ್ಲಿರುವಾಗಲೇ ದೂರನ್ನು ನೀಡಿದ್ದು, ಅವರ ದೂರಿನ ನಂತರ ಮೃತ ಉತ್ತಪ್ಪ ಸೇರಿದಂತೆ ಇಬ್ಬರ ವಿರುದ್ಧ ಜಾತಿ ನಿಂದÀನೆ ಅಸ್ತ್ರವನ್ನು ಬಳಸಿರುವುದು ಸರಿಯಲ್ಲ. ಕೂಡಲೇ ಈ ಕೇಸನ್ನು ರದ್ದುಗೊಳಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.

ಇದೀಗ ಪ್ರಕರಣದ ಬಳಿಕ ಉತ್ತಪ್ಪನವರಿಗೆ ಕೋವಿಡ್ ಇರುವುದು ತಿಳಿದು ಬಂದಿದ್ದು ಇದರಿಂದ ಸಾವನಪ್ಪಿದ್ದಾರೆ ಎಂದು ಕೆಲವರ ಕುಮ್ಮಕ್ಕಿನಿಂದ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾದರೆ ಜಿಲ್ಲೆಯಾದ್ಯಂತ ಯುವಕರನ್ನು ಸಂಘಟಿಸಿ ಶಾಂತಿಯುತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರವೀಣ್ ಉತ್ತಪ್ಪ ಎಚ್ಚರಿಸಿದ್ದಾರೆ.