ಕೂಡಿಗೆ, ಡಿ. 17: ಕೂಡಿಗೆಯ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದಿಂದ ‘ಪ್ರಿಯಾ 555’ ಎಂಬ ಕಂಪೆನಿಯ ಭತ್ತದ ಬೀಜ ಗಳನ್ನು ಪಡೆದು ರೈತರಿಗೆ ವಿತರಿಸಲಾ ಗಿತ್ತು. ಈ ಭತ್ತದ ಬೀಜಗಳು ಕಳಪೆ ಯಾಗಿದ್ದು, ನಾಟಿ ಮಾಡಿದಾಗಿನಿಂದ ಇಂದಿನವರೆಗೂ ಭತ್ತದ ಬೆಳೆಯು ಬರದೆ ಇರುವುದರಿಂದ ಈ ವ್ಯಾಪ್ತಿಯ 24 ರೈತರು ಸಹಕಾರ ಸಂಘಕ್ಕೆ ದೂರು ನೀಡಿದರು. ಅದರಂತೆ ಸಹಕಾರ ಸಂಘದ ಅಧ್ಯಕ್ಷರು ಸೇರಿದಂತೆ ಕಂಪನಿಯ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.

ಹೈದರಾಬಾದ್‍ನ ಮೂಲದ ಕಂಪೆನಿಯಾದ ‘ಪ್ರಿಯಾ 555’ ಕೂಡಿಗೆಯ ಸಹಕಾರ ಸಂಘದ ಮೂಲಕ ಭತ್ತದ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿತ್ತು.

ಕಳಪೆ ಬೀಜದ ಕುರಿತು ಸಹಕಾರ ಸಂಘಕ್ಕೆ ದೂರು ಬಂದ ಹಿನ್ನೆಲೆ ರೈತರಿಗೆ ಅನ್ಯಾಯ ಆಗಬಾರದೆಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಂಪೆನಿಯ ಅಧಿಕಾರಿ ವರ್ಗದವರನ್ನು ಕೂಡಿಗೆಗೆ ಕರೆಸಿ ಹುದುಗೂರು, ಮದಲಾಪುರ, ಕಣಿವೆ, ಕೂಡಿಗೆ, ಮಲ್ಲೇನಹಳ್ಳಿ, ಸಿರಹೂಳಲು ವ್ಯಾಪ್ತಿಯ ಗ್ರಾಮಗಳ ಹಾರಂಗಿ ಅಚ್ಚುಕಟ್ಟು ಪ್ರದೇಶದ ಜಮೀನಿಗೆ ಭೇಟಿ ನೀಡಿ ಕಂಪೆನಿಯ ಭತ್ತದ ಬೆಳೆಯನ್ನು ಪರಿಶೀಲಿಸಿ ರೈತರ ಮತ್ತು ಕಂಪೆನಿಯ ಒಪ್ಪಂದದಂತೆ ಬೆಳೆ ಹಾಳಾಗಿದ್ದ ಭಾಗದ ಸ್ವಲ್ಪಮಟ್ಟದ ಪರಿಹಾರವನ್ನು ಕೊಡುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಕಂಪೆನಿಯ ರಾಷ್ಟ್ರೀಯ ಮಟ್ಟದ ಮುಖ್ಯಸ್ಥ ಪ್ರತಾಪ್ ರೆಡ್ಡಿ, ರಾಜ್ಯ ವಲಯದ ಮುಖ್ಯಸ್ಥ ರಾಜಶೇಖರ, ಮೈಸೂರು ವಿಭಾಗದ ವಿತರಣಾ ಅಧಿಕಾರಿ ವೆಂಕಟೇಶ ಸೇರಿದಂತೆ ಕೂಡಿಗೆ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಹಾಗೂ ಇತರರು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಭೆ ನಡೆಸಿ ಪರಿಹಾರವನ್ನು ಕೊಡುವಂತೆ ತೀರ್ಮಾನಿಸಿದರು.

-ಕೆ.ಕೆ. ನಾಗರಾಜಶೆಟ್ಟಿ