ಕುಶಾಲನಗರ, ಡಿ 17: ಅಧಿಕಾರ ಅಂತಸ್ತು ಎನ್ನೋದು ಯಾರನ್ನೂ ಬಿಡೋದಿಲ್ಲ. ಇಲ್ಲೊಂದು ಕುಟುಂಬದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಂಡನಿಗೆ ವಿರುದ್ಧವಾಗಿ ಹೆಂಡತಿಯೇ ಸೆಡ್ಡು ಹೊಡೆದು ಸ್ಪರ್ಧಿಸಿರುವ ಪ್ರಕರಣ ವರದಿಯಾಗಿದೆÉ.

ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಇಂತಹ ಅಪರೂಪದ ಸ್ಪರ್ಧೆ ಏರ್ಪಟ್ಟಿದೆ. ಪಂಚಾಯಿತಿಯ ಎರಡನೇ ವಾರ್ಡ್‍ನ ಕಂಬಿಬಾಣೆಯಲ್ಲಿ ಅಲ್ಲಿನ ಕಿಶೋರ್ ಎಂಬವರು ಸಾಮಾನ್ಯ ವರ್ಗದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅದೇ ವಾರ್ಡಿನಿಂದಲೇ ಅವರ ಪತ್ನಿ ಶ್ರೀಜಾ ಅದೇ ವರ್ಗದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಈ ತಿಂಗಳ 22 ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಗಂಡ ಹೆಂಡತಿ ಇಬ್ಬರೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇಬ್ಬರೂ ಒಂದೇ ವಾರ್ಡಿನಿಂದ ಸ್ಪರ್ಧಿಸಿರುವ ಬಗ್ಗೆ ಪ್ರಶ್ನಿಸಿದರೆ ಮನೆಯಲ್ಲಿ ಅಷ್ಟೇ ನಾವು ಪತಿ ಪತ್ನಿ ಎಂದರಲ್ಲದೆ ಹೊರಗೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು. ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತಹಾಕಿ ಗೆಲ್ಲಿಸುತ್ತಾರೆ. ಇಬ್ಬರಲ್ಲಿ ಯಾರು ಗೆದ್ದರೂ ಪರವಾಗಿಲ್ಲ. ಆದರೆ ಮತದಾರರು ಮಾತ್ರ ಅವರ ಇಷ್ಟದಂತೆ ಆಯ್ಕೆ ಮಾಡುವ ಹಕ್ಕಿದೆÉ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭ್ಯರ್ಥಿ ಕಿಶೋರ್. ಮತ್ತೊಂದು ವಿಶೇಷವೆಂದರೆ ಇಬ್ಬರು ಒಟ್ಟಿಗೆ ಸೇರಿ ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವುದು ಇಬ್ಬರೂ ಕೂಡ ನಮಗೆ ಮತ ನೀಡಿ ಅಂತ ಕೇಳುತ್ತಿದ್ದಾರೆ. ಇನ್ನು ಇದೇ ವಾರ್ಡ್‍ನಿಂದ ಇನ್ನೂ 9 ಜನರು ಕಣದಲ್ಲಿದ್ದು, ಜನರು ಯಾರನ್ನು ಆಯ್ಕೆ ಮಾಡುತ್ತಾರೋ ಅನ್ನುವುದನ್ನು ಮಾತ್ರ ಕಾದು ನೋಡಬೇಕಾಗಿದೆ.

ಮುಳ್ಳುಸೋಗೆಯಲ್ಲಿಯೂ ಪ್ರತಿಸ್ಪರ್ಧೆ

ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮಪಂಚಾಯ್ತಿ ಚುನಾವಣೆಗೆ ಪತಿ, ಪತ್ನಿ ಇಬ್ಬರೂ ಪಕ್ಷೇತರರಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಮುಳ್ಳುಸೋಗೆ 2ನೇ ವಾರ್ಡ್‍ನ ಸುಚಿತ್ರ ಮತ್ತು ಎಂ.ಎಲ್.ತಮ್ಮಯ್ಯ ದಂಪತಿಗಳು ಒಂದೇ ವಾರ್ಡ್‍ನಿಂದ ಸ್ಪರ್ಧಿಸುತ್ತಿರುವುದು ವಿಶೇಷ ಎನ್ನಬಹುದು. ಕಳೆದ ಸಾಲಿನಲ್ಲಿ ಪಂಚಾಯಿತಿಗೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸದಸ್ಯೆಯಾಗಿದ್ದ ಸುಚಿತ್ರಾ ಅವರಿಗೆ ಈ ಬಾರಿ ಪಕ್ಷದ ಟಿಕೆಟ್ ಕೈತಪ್ಪಿದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರ ಪತಿ ತಮ್ಮಯ್ಯ ಅವರು ಪ್ರಥಮ ಪ್ರಯತ್ನವಾಗಿ ಪಕ್ಷೇತರರಾಗಿ ಅದೃಷ್ಟ ಪರೀಕ್ಷೆಗೆ ಸಿದ್ದರಾಗಿದ್ದಾರೆ.

ಮುಳ್ಳುಸೋಗೆಯ 2ನೇ ವಾರ್ಡ್‍ನ ಬಿಸಿಎಂ (ಎ) ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮಯ್ಯ, ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಸುಚಿತ್ರಾ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮದೇ ಪಕ್ಷದ ಒಡನಾಡಿ, ಮುಖಂಡರೊಬ್ಬರ ಅಸಹಕಾರದಿಂದ ನಮ್ಮಿಬ್ಬರಿಗೆ ಪಕ್ಷದ ಟಿಕೆಟ್ ಕೈತಪ್ಪಿದೆ. ಅವರಿಗೆ ಸೆಡ್ಡು ಹೊಡೆದು ಈ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಸುಚಿತ್ರಾ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಗೌರಿ ಗಣೇಶ ದೇವಾಲಯ ನಿರ್ಮಾಣ ವಿಚಾರದಲ್ಲಿ ಉಂಟಾದ ಅಸಮಾಧಾನ ಈ ಬೆಳವಣಿಗೆಗೆ ಕಾರಣವಾಗಿದೆ. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷೆಯಾಗಿ ತಾನು ಕಳೆದ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಇದೀಗ ಪತಿ ಮತ್ತು ನಾನು ಒಟ್ಟಿಗೆ ಮತಯಾಚನೆಯಲ್ಲಿ ತೊಡಗಿದ್ದೇವೆ. ಇಬ್ಬರಲ್ಲಿ ಯಾರು ಗೆದ್ದರೂ ಕೂಡ ಯಾವುದೇ ಮನಸ್ತಾಪವಿಲ್ಲದೆ ಗ್ರಾಮದ ಅಭಿವೃದ್ದಿಗೆ ಶ್ರಮಿಸುವುದಾಗಿ ಸುಚಿತ್ರಾ ಶಕ್ತಿಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಳ್ಳುಸೋಗೆ 2ನೇ ವಾರ್ಡ್ ನಿಂದ 4 ಸದಸ್ಯರ ಆಯ್ಕೆಗೆ ಒಟ್ಟು 13 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. - ವರದಿ : ಚಂದ್ರಮೋಹನ್