ಶ್ರೀಮಂಗಲ, ಡಿ. 17: ‘ತಿಂಗಕೋರ್ ಮೊಟ್ಟ್ ತಲಕಾವೇರಿಕ್’ ಎಂಬ ವಿಶಿಷ್ಟ ಚಿಂತನೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕಾವೇರಿ ಮಾತೆಯ ಭಕ್ತರು ಪ್ರತಿ ತಿಂಗಳ 17ನೇ ತಾರೀಕಿನಂದು ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲ ಹಾಗೂ ತಲಕಾವೇರಿಗೆ ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿ ತಿಂಗಳ 17 ರಂದು ತಲಕಾವೇರಿ ಮತ್ತು ಭಾಗಮಂಡಲಕ್ಕೆ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ಸೇವೆ ಸಲ್ಲಿಸುವುದಾಗಿ ಪ್ರಾರ್ಥನೆ ಮಾಡಿದರು. ಈ ಸಂದರ್ಭ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಕಾವೇರಿ ಭಕ್ತರಾದ ನಾಲ್ಕೇರಿ ಗ್ರಾಮದ ಮಲ್ಲಪನ್ನೇರ ವಿನು ಅವರು ಕಾವೇರಿ ಮಾತೆಗೆ ಅನಾಥ ಭಾವ ಬರಬಾರದು ಎಂಬ ನಿಟ್ಟಿನಲ್ಲಿ ಪ್ರತಿ ತಿಂಗಳ 17 ರಂದು ತಲಕಾವೇರಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಹೆಚ್ಚಿನ ಸಂಖ್ಯೆಯ ಕೊಡವರು ಬರಬೇಕು. ಕಾವೇರಿ ಕೊಡವರ ಕುಲ ಮಾತೆಯಾಗಿದ್ದು, ನಾವು ಕೇವಲ ತುಲಾ ಸಂಕ್ರಮಣದಂದು ಮಾತ್ರ ಕ್ಷೇತ್ರಕ್ಕೆ ಆಗಮಿಸದೆ ಆಗಾಗ್ಗೆ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸುವುದರಿಂದ ಕಾವೇರಿ ಮಾತೆಗೆ ಸಂತೃಪ್ತಿ ಭಾವನೆ ಬರುತ್ತದೆ, ಈ ನಿಟ್ಟಿನಲ್ಲಿ ‘ತಿಂಗಕೋರ್ ಮೊಟ್ಟ್ ತಲಕಾವೇರಿಕ್’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದು 2ನೇ ತಿಂಗಳ ಕಾರ್ಯಕ್ರಮ ವಾಗಿದೆ ಎಂದು ಹೇಳಿದರು.
ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಮಾತನಾಡಿ, ಕಾವೇರಿ ಕೊಡಗಿಗೆ ಆರಾಧ್ಯ ದೇವತೆಯಾದರೆ ಕೊಡವರಿಗೆ ಕುಲ ಮಾತೆ, ಕ್ಷೇತ್ರದಲ್ಲಿ ಪ್ರವಾಸಿಗರೇ ಅಧಿಕವಾಗಿದ್ದು ಸ್ಥಳೀಯರು ಇಲ್ಲಿಗೆ ಹೆಚ್ಚಾಗಿ ಬಾರದೆ ಇರುವ ಕಾರಣ ಪ್ರವಾಸಿಗರು ಕ್ಷೇತ್ರದ ಮಹತ್ವ ಅರಿಯದೆ ಭಕ್ತಿಗೆ ಪ್ರಾಧಾನ್ಯತೆ ನೀಡದೆ ಇರುವುದು ಕಂಡುಬಂದಿದೆ. ಆದ್ದರಿಂದ ಕ್ಷೇತ್ರದಲ್ಲಿ ಭಕ್ತಿಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಕಾವೇರಿ ಮಾತೆಗೆ ಅನಾಥ ಭಾವ ಕಾಡದಂತೆ ಸ್ಥಳೀಯರು ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ತಿಂಗಳ 17 ರಂದು ಕಾವೇರಿ ಮಾತೆಯ ಸೇವೆಗೆ ಆಗಮಿಸುವುದಾಗಿ ಹೇಳಿದರು.
ಈ ಸಂದರ್ಭ ತಲಕಾವೇರಿಯ ಮೂಲ ತಕ್ಕಾಮೆ ಕುಟುಂಬಸ್ಥರಾದ ಮಂಡೀರ ಮತ್ತು ಮಣವಟ್ಟಿರ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಇದಲ್ಲದೆ ಕೊಡವರ ನರಮೇಧ ನಡೆದ ದೇವಟ್ ಪರಂಬುವಿಗೆ ತೆರಳಿ ಬಲಿದಾನವಾದ ಹಿರಿಯರಿಗೆ ‘ಮೀದಿ ನೀರು’ ಇಟ್ಟು ಪ್ರಾರ್ಥಿಸಿದರು.
ಈ ಸಂದರ್ಭ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಉಪಾಧ್ಯಕ್ಷ ಅಣ್ಣೀರ ಹರೀಶ್ಮಾದಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪೃಥ್ವಿಸುಬ್ಬಯ್ಯ, ಅಪ್ಪಡೇಂರಂಡ ನವೀನ್ದೇವಯ್ಯ, ಅಪ್ಪಚ್ಚೀರ ಕಮಲ, ಚೊಟ್ಟೇಕ್ಮಾಡ ಮಾದಪ್ಪ, ಪಾರ್ವತಿಮಾದಪ್ಪ, ಚೊಟ್ಟೆಪಂಡ ಸ್ವಪ್ನ, ಚೊಟ್ಟೆಪಂಡ ಭರತ್ಉತ್ತಪ್ಪ, ಮಂಡಿರ ಕುಟುಂಬದ ರೋಶನ್, ಸಚಿನ್, ಮಿಥುನ್, ರಿಪನ್, ತನಿಷ್, ಮೋನಿಷ್, ತಸ್ವಿ, ಮಣವಟ್ಟಿರ ನಂದ ಇವರುಗಳು ಪಾಲ್ಗೊಂಡಿದ್ದರು.