ಮಡಿಕೇರಿ, ಡಿ. 17: ತೋಟದ ಲೈನ್ ಮನೆಗಳಲ್ಲಿರುವ ಕಾರ್ಮಿಕ ವರ್ಗಕ್ಕೆ ಜಿಲ್ಲಾಡಳಿತ ನಿವೇಶನ ನೀಡದಿದ್ದಲ್ಲಿ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬಲಮುರಿ ಗ್ರಾಮದ ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ಕಾರ್ಮಿಕ ಕೆ.ಆರ್. ಕವಿನ್, ಬಡ ಕಾರ್ಮಿಕರಿಗೆ ನಿವೇಶನ ನೀಡಬೇಕು ಮತ್ತು ನಿವೇಶನಕ್ಕಾಗಿ ಹೋರಾಟ ನಡೆಸಿದ ಸಂದರ್ಭ ಕಾರ್ಮಿಕರ ವಿರುದ್ಧ ಹೂಡಲಾಗಿರುವ ದೂರುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ನಿವೇಶನಕ್ಕಾಗಿ ಒತ್ತಾಯಿಸಿ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಬಲಮುರಿ ಗ್ರಾಮದ ಲೈನ್‍ಮನೆಗಳಲ್ಲಿ ವಾಸವಿರುವ ಕೂಲಿ ಕಾರ್ಮಿಕರಿಗೆ ಶೀಘ್ರ ನಿವೇಶನ ನೀಡಲು ನಿರ್ದೇಶನ ನೀಡಬೇಕು ಮತ್ತು ಅಮಾಯಕರ ಮೇಲೆ ಇರುವ ಕೇಸ್ ಹಿಂಪಡೆಯಬೇಕು. ತಪ್ಪಿದಲ್ಲಿ ಲೈನ್‍ಮನೆಯಲ್ಲಿ ವಾಸವಿರುವ ಸುಮಾರು 40ರಷ್ಟು ಕಾರ್ಮಿಕರು ಮತ ಚಲಾವಣೆ ಮಾಡುವುದಿಲ್ಲವೆಂದು ತಿಳಿಸಿದರು. ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಯಾವುದೇ ಭರವಸೆಗಳು ಈಡೇರುತ್ತಿಲ್ಲವೆಂದು ಕವಿನ್ ಆರೋಪಿಸಿದರು.

ಸುಮಾರು 5 ವರ್ಷಗಳ ಹಿಂದೆ ಕೆಲವು ಮುಖಂಡರ ಭರವಸೆಗಳನ್ನು ನಂಬಿ ಕೂಲಿ ಕಾರ್ಮಿಕರು ನಿವೇಶನ ಸಿಗುಬಹುದೆಂಬ ಭರವಸೆಯೊಂದಿಗೆ ಗ್ರಾಮದ ಕೊರಂಬಾಣೆ ಎಂಬ ಪೈಸಾರಿಗೆ ತೆರಳಿದ್ದರು. ಆದರೆ ಜಾಗ ಅತಿಕ್ರಮಣ ಎಂದು ಅಮಾಯಕರ ಮೇಲೆ ಕೇಸ್ ದಾಖಲಿಸಲಾಗಿದ್ದು, ಇಲ್ಲಿಯವರೆಗೆ ಈ ಪ್ರಕರಣ ಇತ್ಯರ್ಥವಾಗಿಲ್ಲ. ಕಾರ್ಮಿಕರು ಕೋರ್ಟ್‍ಗೆ ಅಲೆದಾಡುವ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ತಕ್ಷಣ ಕೇಸ್ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಲಮುರಿ ಗ್ರಾಮದ ಕಾರ್ಮಿಕರಾದ ಎಂ.ಎಸ್. ಮಂಜು, ಕೆ.ಪಿ. ಮಹೇಂದ್ರ, ಎಂ.ಎಸ್. ರವಿ, ಎಂ. ರಾಮರ್ ಹಾಗೂ ಕೆ.ವಿ. ಯೋಗಾನಂದ ಉಪಸ್ಥಿತರಿದ್ದರು.