ಕುಶಾಲನಗರ, ಡಿ. 17: ಭಾಗಮಂಡಲ ಸಂಗಮದಲ್ಲಿ ಪ್ರವಾಹ ಸಂದರ್ಭ ಸಂಪರ್ಕ ಕಲ್ಪಿಸಲು ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಹಲವು ಕಾರಣಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಮಳೆಗಾಲ ಅವಧಿಯಲ್ಲಿ ಭಾಗಮಂಡಲ, ತಲಕಾವೇರಿ, ನಾಪೋಕ್ಲು ಸಂಪರ್ಕ ರಸ್ತೆಗಳು ಮುಳುಗಡೆಯಾಗುತ್ತಿರುವ ಹಿನ್ನೆಲೆ ಜನರ ಬವಣೆ ತಪ್ಪಿಸಲು ರೂ. 34 ಕೋಟಿ ವೆಚ್ಚದಲ್ಲಿ ಕಳೆದ ಎರಡು ವರ್ಷಗಳಿಂದ ಚಾಲನೆಗೊಂಡ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಒಂದೆಡೆ ಸ್ಥಳೀಯರಿಗೆ ಸಮಸ್ಯೆಯ ಆಗರವಾದರೆ ಇನ್ನೊಂದೆಡೆ ಪ್ರವಾಹ ಸಂದರ್ಭ ತಪ್ಪದ ಬವಣೆ ಮುಂದುವರೆದಿದೆ.
ಸುಮಾರು 35 ಪಿಲ್ಲರ್‍ಗಳನ್ನು ಒಳಗೊಂಡಂತೆ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಗೆ ಅವಶ್ಯವಿರುವ ಜಾಗವನ್ನು ತೆರವುಗೊಳಿಸುವ ಕಾರ್ಯ ಇನ್ನೂ ಅಪೂರ್ಣಗೊಂಡಿದ್ದು ಇದು ಕಾಮಗಾರಿಯ ನಿಧಾನಗತಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಭಾಗಮಂಡಲ, ತಲಕಾವೇರಿ, ನಾಪೋಕ್ಲು ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ನಿರ್ಮಾಣ ಸಂದರ್ಭ ಸುಮಾರು 35 ಮನೆಗಳ ತೆರವು ಕಾರ್ಯಾಚರಣೆ ಆಗಬೇಕಿದ್ದು, ಇದರಲ್ಲಿ 25 ಮನೆಗಳ ದಾಖಲಾತಿಗಳು ನೋಂದಾವಣಿಯಾಗಿವೆ ಎಂದು ಕಾಮಗಾರಿ ಕೈಗೆತ್ತಿಕೊಂಡಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.
ಉಳಿದಂತೆ ಕೆಲವು ಮನೆಗಳ ದಾಖಲಾತಿಗಳು ಇನ್ನೂ ಲಭ್ಯವಾಗಿಲ್ಲದ ಕಾರಣ ಆ ಮನೆಗಳ ತೆರವು ಕಾರ್ಯ ನಡೆಯದೆ ಕಾಮಗಾರಿಗೆ ತೊಡಕುಂಟಾಗಿದೆ ಎಂದು ನಿಗಮದ ಅಧಿಕಾರಿ ಖಲೀಂ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ ತಕ್ಷಣ ಕ್ರಮಕೈಗೊಂಡಲ್ಲಿ ಕಾಮಗಾರಿಯ ವೇಗ ಹೆಚ್ಚಿಸಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯವಾಗಿದೆ. ಇನ್ನೊಂದೆಡೆ ರಸ್ತೆ ಬದಿಯಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳ ತೆರವು ಕಾರ್ಯ ಕೂಡ ನಡೆಯದೆ ಕಾಮಗಾರಿಗೆ ಅಡ್ಡಿಯುಂಟಾಗುತ್ತಿದೆ. ಬೃಹತ್ ಯಂತ್ರೋಪಕರಣಗಳು ಕೆಲಸ ನೆರವೇರಿಸುವ ಸಂದರ್ಭ ಅಪಾಯ ಉಂಟಾಗುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಾಗಿದ್ದು ಇದೀಗ ಹೆಚ್ಚುವರಿ ಅವಧಿ ದೊರೆತರೂ ಕೆಲಸ ಶೇ. 30 ರಷ್ಟು ಮಾತ್ರ ನಡೆದಿದೆ. ಕಾಮಗಾರಿ ನಡೆಯುವ ಸಂದರ್ಭ ಎರಡೂ ಕಡೆಯ ಅಂಗಡಿ ಮುಂಗಟ್ಟುಗಳು ಧೂಳುಮಯವಾಗುತ್ತಿದ್ದು ವರ್ತಕರಿಗೆ ವ್ಯಾಪಾರ ವಹಿವಾಟು ಮಾಡುವುದು ಕಷ್ಟಕರವಾಗಿದೆ ಎನ್ನುವ ದೂರುಗಳು ಸ್ಥಳೀಯ ಉದ್ಯಮಿಗಳಿಂದ ಕೇಳಿಬಂದಿದೆ. ಜೊತೆಗೆ ದೇವಾಲಯಗಳಿಗೆ ಆಗಮಿಸುವ ಭಕ್ತಾದಿಗಳಿಗೂ ತೆರಳುವ ಸಂದರ್ಭ ಅನಾನುಕೂಲ ಉಂಟಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಮಡಿಕೇರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು ಸಂಪರ್ಕ ರಸ್ತೆ ಪ್ರವಾಹದಿಂದ ಕಡಿತಗೊಳ್ಳುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರವಾಗಿ ಮೇಲ್ಸೇತುವೆ ನಿರ್ಮಾಣವಾಗುತ್ತಿದ್ದರೂ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಸ್ಥಳೀಯ ಉದ್ಯಮಿ ಕುಯ್ಯಮುಡಿ ಸುನಿಲ್ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿರುವ ನಿಗಮದ ಅಧಿಕಾರಿಗಳು ಕೋವಿಡ್ ಹಿನ್ನೆಲೆ, ಲಾಕ್‍ಡೌನ್ ಸಂದರ್ಭ ಸೇರಿದಂತೆ ಕಳೆದ 9 ತಿಂಗಳು ಕಾರ್ಮಿಕರು ಕೆಲಸವಿಲ್ಲದೆ ತಮ್ಮ ಸ್ವಂತ ಊರಿಗೆ ತೆರಳಿ ಹಿಂತಿರುಗದಿರುವುದು ವಿಳಂಬಕ್ಕೆ ಕಾರಣ ಎಂದಿದ್ದಾರೆ. ಇದೀಗ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಇಂಜಿನಿಯರ್ ಖಲೀಂ ಮತ್ತು ಕಾಮಗಾರಿ ಗುಣಮಟ್ಟ ಪರಿಶೀಲನಾ ಅಧಿಕಾರಿ ಕವಿಪ್ರಸಾದ್ ಮಾಹಿತಿ ನೀಡಿದ್ದಾರೆ. - ಚಂದ್ರಮೋಹನ್