ಮಡಿಕೇರಿ, ಡಿ. 17: ಕಾರ್ಮಿಕ ಇಲಾಖೆ ವತಿಯಿಂದ ತಾ. 19 ರವರೆಗೆ ಸಕಾಲ ಸಪ್ತಾಹ ದಿನಾಚರಣೆಯನ್ನು ಆಚರಿಸುತ್ತಿದ್ದು, ಸಕಾಲ ಯೋಜನೆಯ ಉದ್ದೇಶ, ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಕಾಲ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯಿಂದ ತಾ. 19 ರವರೆಗೆ ಸಕಾಲ ಸಪ್ತಾಹ ನಡೆಯಲಿದೆ.

ಕಾರ್ಮಿಕ ಇಲಾಖೆ ಹಾಗೂ ಈ ಕಚೇರಿಯ ಅಧೀನ ಕಚೇರಿಗಳಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಫಲಾನುಭವಿಗಳ ನೋಂದಣಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳಾದ ಶೈಕ್ಷಣಿಕ ಧನಸಹಾಯ, ಮದುವೆ ಧನಸಹಾಯ, ಒಳರೋಗಿ ವೈದ್ಯಕೀಯ, ಪ್ರಮುಖ ವೈದ್ಯಕೀಯ, ಹೆರಿಗೆ ಧನಸಹಾಯ ಅರ್ಜಿಗಳ ವಿಲೇವಾರಿ, ಕಟ್ಟಡ ಮತ್ತು ಇತರೆ ನಿರ್ಮಾಣ ಸಂಸ್ಥೆಗಳ ನೋಂದಣಿ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಮತ್ತು ನವೀಕರಣ ಸೇವೆಗಳು ಸಕಾಲ ಯೋಜನೆಯಡಿ ವಿಲೇವಾರಿ ಮಾಡಲಾಗುತ್ತದೆ. ಸಾರ್ವಜನಿಕರು ಈ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ ಸಕಾಲ ಸಪ್ತಾಹ ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿ, ಜಿಲ್ಲಾಡಳಿತ ಭವನ, ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಸಂಪರ್ಕಿಸುವಂತೆ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ತಿಳಿಸಿದ್ದಾರೆ.