ವೀರಾಜಪೇಟೆ, ಫೆ. ೨೫: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವೊಂದನ್ನು ವೀರಾಜಪೇಟೆ ತಾಲೂಕು ಸಿಐಡಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ.ಗೋಣಿಕೊಪ್ಪಲು ಚೆನ್ನಂಗೊಲ್ಲಿ ಸನಿಹ ಕಾರ್ಯಾಚರಣೆ ನಡೆಸಲಾಗಿದ್ದು, ಎರಡು ನಕ್ಷತ್ರ ಆಮೆಗಳ ಸಹಿತ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ. ಚೆನ್ನಂಗೊಲ್ಲಿಯ ಸಾರ್ವಜನಿಕ ಬಸ್ ತಂಗುದಾಣದ ಬಳಿ ರಾಮನಗರ ಜಿಲ್ಲೆಯ ಎಂ. ರಾಮಮೂರ್ತಿ, ವಿ.ಕೆ. ರಮೇಶ್ ಹಾಗೂ ಮೈಸೂರು ಕೆ.ಆರ್. ನಗರ ಬಿ.ಎನ್. ಯೋಗೇಶ್ ಎಂಬವರನ್ನು ಬಂಧಿಸಲಾಗಿದೆ.ಈ ಮೂವರು ಆರೋಪಿಗಳು ಅಪರೂಪದ ಎರಡು ನಕ್ಷತ್ರ ಆಮೆಗಳನ್ನು ರೂ. ೫೦ ಲಕ್ಷಕ್ಕೆ ಮಾರಾಟ ಮಾಡಲು ಯತ್ನ ನಡೆಸಿದ್ದರೆನ್ನಲಾಗಿದೆ. ಈ ಬಗ್ಗೆ ದೊರೆತ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಲಾಗಿದೆ. ರಾಮನಗರದಿಂದ ಕಾರಿನಲ್ಲಿ
(ಕೆ.ಎ. ೪೨ ಎ. ೬೮೦೮) ಇಟಿಯೋಸ್ ಕಾರಿನಲ್ಲಿ ಆರೋಪಿಗಳು ನಕ್ಷತ್ರ ಆಮೆ ಸಹಿತ ಆಗಮಿಸಿದಾಗ ಅವರನ್ನು ಬಂಧಿಸಲಾಗಿದೆ. ಬಂಧಿತರನ್ನು ಪೊನ್ನಂಪೇಟೆ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ೧೫ ದಿನಗಳ ನ್ಯಾಯಾಂಗ ಬಂಧನಕ್ಕೊಳ ಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ವೀರಾಜಪೇಟೆ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ವೀಣಾ ನಾಯಕ್, ಸಿಬ್ಬಂದಿಗಳಾದ ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಪಿ.ಬಿ. ಮೊಣ್ಣಪ್ಪ, ಎಂ.ಬಿ. ಗಣೇಶ್, ಎಸ್.ಎಂ. ಯೋಗೇಶ್ ಪಾಲ್ಗೊಂಡಿದ್ದರು.