ಗೋಣಿಕೊಪ್ಪಲು, ಫೆ. ೨೫: ಕೊಡಗು ಜಿಲ್ಲೆಯ ರೈತ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಕಾಡ್ಯಮಾಡ ಮನು ಸೋಮಯ್ಯ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ. ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ೩೦ ಜಿಲ್ಲೆಗಳ ಪದಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಮಂಡಳಿಯ ಒಪ್ಪಿಗೆಯ ಮೇರೆ ರಾಜ್ಯ ಸಮಿತಿಗೆ ನೇಮಕ ಮಾಡಲಾಗಿದೆ. ಅಲ್ಲದೆ ಮೈಸೂರು ವಿಭಾಗೀಯ ಮಟ್ಟದ ಉಸ್ತುವಾರಿಯಾಗಿಯೂ ಜವಾಬ್ದಾರಿ ನೀಡಲಾಗಿದೆ.
ಕಳೆದ ಏಳು ವರ್ಷಗಳ ಹಿಂದೆ ಕೊಡಗು ಜಿಲ್ಲೆಗೆ ರೈತ ಸಂಘದ ರಾಜ್ಯ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ಬರಮಾಡಿಕೊಂಡು ಜಿಲ್ಲೆಯಲ್ಲಿ ರೈತ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿತ್ತು. ನಂತರದ ವರ್ಷಗಳಲ್ಲಿ ರೈತ ಸಂಘವು ಉತ್ತಮ ಸಂಘಟನೆಯಾಗಿ ಹಲವು ಜನಪರ ಹೋರಾಟಗಳನ್ನು ನಡೆಸುವ ಮೂಲಕ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡಿದ್ದವು. ಮನು ಸೋಮಯ್ಯ ಮೂಲತಃ ದಕ್ಷಿಣ ಕೊಡಗಿನ ಕಾನೂರಿನ ನಿವಾಸಿಯಾಗಿದ್ದಾರೆ.