ಮಾ. ೪ ರಂದು ವಿಧಾನಸೌಧ ಚಲೋ ಕಾರ್ಯಕ್ರಮ

ಕುಶಾಲನಗರ, ಫೆ. ೨೫: ರಾಜ್ಯಾ ದ್ಯಂತ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಲ್‌ಕಲೆಕ್ಟರ್, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಸೇರಿದಂತೆ ಒಟ್ಟು ೬೩ ಸಾವಿರ ನೌಕರರಿಗೆ ಕಾಂಟ್ರಿಬ್ಯೂಟರಿ ಪಿಂಚಣಿ ಸೌಲಭ್ಯವನ್ನು ಕೂಡಲೇ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್. ಭರತ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾ.ಪಂ. ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಮಾ. ೪ ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೊಡಗು ಜಿಲ್ಲೆಯಿಂದ ಒಂದು ಸಾವಿರಕ್ಕೂ ಹೆಚ್ಚಿನ ನೌಕರರು ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ರಾಜ್ಯ ಸರ್ಕಾರ ಕಳೆದ ೪ ವರ್ಷಗಳ ಹಿಂದೆ ಕನಿಷ್ಟ ವೇತನ ನಿಗದಿ ಮಾಡಿದೆ. ಜೊತೆಗೆ ಐದು ವರ್ಷಕ್ಕೆ ಒಮ್ಮೆ ಕಾನೂನಿನ ಪ್ರಕಾರ ವೇತನ ಪರಿಷ್ಕರಣೆ ಮಾಡಬೇಕು. ಇದುವರೆಗೂ ವೇತನ ಪರಿಷ್ಕರಣೆ ಮಾಡಿಲ್ಲ.

ಗ್ರಾ.ಪಂ. ನೌಕರರಿಗೆ ಸರ್ಕಾರ ಮುಂದಿನ ಆರ್ಥಿಕ ವರ್ಷದಲ್ಲಿ ವೇತನ ಪಾವತಿಸಲು ರೂ. ೩೮೩ ಕೋಟಿಯನ್ನು ಬಜೆಟ್‌ನಲ್ಲಿ ಸೇರಿಸಬೇಕು. ನಗರ, ಸ್ಥಳೀಯ ಸಂಸ್ಥೆಗಳಲ್ಲಿರುವAತೆ ೭೦೦ ಜನಸಂಖ್ಯೆಗೆ ಒಬ್ಬ ಪೌರನೌಕರರಂತೆ ಪರಿಗಣಿಸಿ ಗ್ರಾ.ಪಂ. ನಿರ್ಣಯ ಮಾಡಿ ಜಿ.ಪಂ.ನಲ್ಲಿ ಅನುಮೋದನೆ ನೀಡಬೇಕು.

ಬಡ್ತಿಗೆ ಅವಕಾಶವಿರುವ ಕರವಸೂಲಿಗಾರ ಮತ್ತು ಗುಮಾಸ್ತ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಸಿಬ್ಬಂದಿಗಳಿಗೆ ನಿವೃತ್ತಿ ನಂತರ ಗ್ರಾಚ್ಯುಟಿ ನೀಡುವಂತಾಗ ಬೇಕು ಎಂದು ಭರತ್ ಒತ್ತಾಯಿಸಿದರು. ಬಿಲ್ ಕಲೆಕ್ಟರ್, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ರೂ. ೨೫ ಸಾವಿರ, ಜವಾನ್, ನೀರುಗಂಟಿ, ವಾಟರ್ ಮ್ಯಾನ್‌ಗಳಿಗೆ ಕನಿಷ್ಟ ರೂ. ೨೩ ಸಾವಿರ, ಕಸಗುಡಿಸುವ ನೌಕರರಿಗೆ ರೂ. ೨೧ ಸಾವಿರ ಕನಿಷ್ಟ ವೇತನ ನಿಗದಿಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಗೋಷ್ಠಿಯಲ್ಲಿ ಗ್ರಾ.ಪಂ. ನೌಕರರ ಸಂಘದ ಹೋಬಳಿ ಅಧ್ಯಕ್ಷ ಅಣ್ಣಪ್ಪ, ಸದಸ್ಯ ಬಾಬು ಉಪಸ್ಥಿತರಿದ್ದರು.