ಕೂಡಿಗೆ ಫೆ. ೨೫: ರಾಜ್ಯ ಪಶುಪಾಲನ ಮತ್ತು ಮೀನುಗಾರಿಗೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ. ಕಲ್ಪನಾ ಅವರು ಕೂಡಿಗೆಯ ಪಶುಪಾಲನೆ ಇಲಾಖೆಯ ಮೂರು ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಯನ್ನು ಪಡೆದುಕೊಂಡರು. ಕೇಂದ್ರವು ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆ ಅಧಿಕಾರಿಗಳು ತಳ ಮಟ್ಟದಿಂದ ಹೈನುಗಾರಿಕೆಗೆ ಪೂರಕವಾಗಿ ರೈತರಿಗೆ ವಿವಿಧ ತರಬೇತಿಯನ್ನು ನೀಡಿ ನೂತನ ಹೈಬ್ರೀಡ್ ತಳಿಗಳನ್ನು ಸಾಕಾಣಿಕೆ ಮಾಡಲು ಬೇಕಾಗುವ ಎಲ್ಲಾ ಮಾಹಿತಿಯನ್ನು ನೀಡುವಂತೆ ಸೂಚಿಸಿದರು.
ಮೊದಲ ಹಂದಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೂತನವಾಗಿ ಆರಂಭವಾಗಿರುವ ಕೃತಕ ಗರ್ಭಧಾರಣೆ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆದು ನಂತರ ಇದರ ಪ್ರಯೋಗಗಳನ್ನು ತಳಮಟ್ಟದ ರೈತರಿಗೆ ತಿಳಿಸಿ ಅವುಗಳ ಅಭಿವೃದ್ಧಿಯ ನಂತರ ಸ್ಥಳೀಯ ರೈತರುಗಳಿಗೆ ನೀಡಿ ಅವರುಗಳು ಆ ತಳಿಯನ್ನು ಸಾಕಾಣಿಕೆ ಮಾಡುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿ ಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಕೋಳಿ ಸಾಕಾಣಿಕೆ ಕೇಂದ್ರ ಪಶುಪಾಲನ ಇಲಾಖೆಯ ಜರ್ಸಿ ತಳಿ ಕೇಂದ್ರಕ್ಕೆ ಕಲ್ಪನಾ ಅವರು ಭೇಟಿ ನೀಡಿದರು. ಹಸುಗಳ ಸಾಕಾಣಿಕೆ ಬಗ್ಗೆ ಸಮರ್ಪಕವಾಗಿ ಮಾಹಿತಿಯನ್ನು ಪಡೆದರು.
ಹೊಸದಾಗಿ ಯೋಜನೆ ಕೈಗೊಂಡಿರುವ ದೇಶೀಯ ಹಸುಗಳ ಸಾಕಾಣಿಕೆಯ ಮತ್ತು ಅವುಗಳ ಅಭಿವೃದ್ಧಿಯ ವಿಷಯಗಳನ್ನು ತಿಳಿದು ನಂತರ ಈ ಎಲ್ಲಾ ವಿಚಾರಗಳು ತಳಮಟ್ಟದ ರೈತರಿಗೆ ಮಾಹಿತಿ ದೊರಕಬೇಕು ಅಲ್ಲದೆ ಇಲಾಖೆಯ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರವನ್ನು ಸರಕಾರದ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ಜರ್ಸಿ ತಳಿ ಸಂವರ್ಧನಾ ಕೇಂದ್ರದ ಉಪನಿರ್ದೇಶಕ ಕೃಷ್ಣ ಮೂರ್ತಿ, ಜಿಲ್ಲಾ ಪಶುಪಾಲನ ಇಲಾಖೆಯ ಉಪ ನಿರ್ದೇಶಕ ಡಾ. ಆನಂದ, ಡಾ. ಸುರೇಶ್, ಸೋಮವಾರಪೇಟೆ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವಿ. ಬದಾಮಿ, ಮೀನುಗಾರಿಗೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.