ಕುಶಾಲನಗರ, ಫೆ. ೨೬: ಕುಶಾಲನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಕಾಯಕಲ್ಪ ಕಲ್ಪಿಸುವ ಕೆಲಸ ನಡೆದಿದೆ. ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಕುಶಾಲನಗರ ಸರಕಾರಿ ಸಾರಿಗೆ ಬಸ್ ನಿಲ್ದಾಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಂದಾಜು ೧ ಕೋಟಿ ರೂ ವೆಚ್ಚದ ಕಾಮಗಾರಿ ನಡೆಸಲಾಗಿದೆ.

ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಸಾರಿಗೆ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ ನಡೆದಿದೆ. ಅಂದಾಜು ೧ ಕೋಟಿ ರೂ ವೆಚ್ಚದಲ್ಲಿ ನಿಲ್ದಾಣದ ಆವರಣ ಗೋಡೆ, ಚರಂಡಿ ನಿರ್ಮಾಣ ಸೇರಿದಂತೆ ನವೀಕರಣ ಕಾಮಗಾರಿ ನಡೆದಿದೆ. ದಿನನಿತ್ಯ ೨೫ ಸಾವಿರಕ್ಕೂ ಅಧಿಕ ಪ್ರಯಾಣಿಕರು ಈ ನಿಲ್ದಾಣ ಮೂಲಕ ಪ್ರಯಾಣಿಸುತ್ತಿದ್ದು ನೆರೆಯ ಮೈಸೂರು, ಹಾಸನ, ಮಡಿಕೇರಿ ಮತ್ತು ಕೇರಳ ಕಡೆಗೆ ತೆರಳುವ ಬಸ್‌ಗಳಿಗೆ ಇದು ನಿಲುಗಡೆ ಕೇಂದ್ರವಾಗಿದೆ. ಪ್ರತಿದಿನ ೫೦೦ ಕ್ಕೂ ಅಧಿಕ ಬಸ್‌ಗಳು ಈ ಬಸ್ ನಿಲ್ದಾಣದ ಮೂಲಕ ಸಾಗುತ್ತಿದ್ದು ಪ್ರಯಾಣಿಕರಿಗೆ ಮೂಲಸೌಕರ್ಯ ಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಬಸ್ ನಿಲ್ದಾಣದ ಸಂಚಾರಿ ನಿಯಂತ್ರಣಾಧಿ ಕಾರಿ ಶ್ಯಾಂಶೆಟ್ಟಿ ಮಾಹಿತಿ ನೀಡಿದ್ದಾರೆ. ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಸ್ಥಳೀಯ ಗ್ರಾಮೀಣ ಸಾರಿಗೆ, ಅಂತರ ಜಿಲ್ಲಾ ಬಸ್‌ಗಳು, ಅಂತರ ರಾಜ್ಯ ಬಸ್‌ಗಳ ನಿಲುಗಡೆಗೆ ಪ್ರತ್ಯೇಕ ವಿಭಾಗಗಳನ್ನು ನಿರ್ಮಿಸಲು ಯೋಜನೆ ಹಾಕಲಾಗಿದೆ. ವಾಣಿಜ್ಯ ಸಂಕೀರ್ಣ ನಿರ್ಮಿಸಲು ಕೂಡ ಸಂಸ್ಥೆ ಚಿಂತನೆ ಹರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ರೋಟರಿ ಸಂಸ್ಥೆ ನಿಲ್ದಾಣದ ಆವರಣದಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಲು ಸಹಯೋಗ ಕಲ್ಪಿಸಿದ್ದು ಇದು ನಿಲ್ದಾಣದಲ್ಲಿ ಆಗಾಗ್ಯೆ ನಡೆಯುತ್ತಿರುವ ಕಳ್ಳತನ ಮತ್ತಿತರ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸಹಕಾರಿ ಯಾಗಲಿದೆ. ಸಿಸಿ ಕ್ಯಾಮರದ ಮಾಹಿತಿಗಳನ್ನು ಕುಶಾಲನಗರ ಪೊಲೀಸ್ ಠಾಣೆಗೆ ನೇರವಾಗಿ ಲಭ್ಯವಾಗುವ ನಿಟ್ಟಿನಲ್ಲಿ ಸಂಪರ್ಕ ಕಲ್ಪಿಸಲು ಚಿಂತನೆ ಹರಿಸಲಾಗಿದೆ ಎಂದು ಕುಶಾಲನಗರ ರೋಟರಿ ಅಧ್ಯಕ್ಷ ಕೆ.ಪಿ.ಚಂದ್ರಶೇಖರ್ ತಿಳಿಸಿದ್ದಾರೆ. - ಚಂದ್ರಮೋಹನ್