ಸಿದ್ದಾಪುರ, ಫೆ ೨೬: ಒಂಟಿ ಸಲಗವೊಂದು ಕಾರ್ಮಿಕ ಯುವಕನ ಮೇಲೆ ತಡರಾತ್ರಿ ದಾಳಿ ನಡೆಸಿದ ಪರಿಣಾಮ ಯುವಕ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಸಿದ್ದಾಪುರ ಸಮೀಪದ ಬೀಟಿಕಾಡು ಕಾಫಿ ತೋಟದಲ್ಲಿ ನಡೆದಿದೆ. ಆನಂದಪುರದ ನಿವಾಸಿ ಕಾರ್ಮಿಕ ಏಳುಮಲೈ ಅವರ ಪುತ್ರ ಸಂದೀಪ್ (೨೧) ಮೃತ ದುರ್ದೈವಿ. ಈತನ ಬಳಿಯೇ ಮಲಗಿದ್ದ ಮತ್ತೊಬ್ಬ ಕಾರ್ಮಿಕ ರಾಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಸಿದ್ದಾಪುರದ ಬಿಬಿಟಿಸಿ ಕಂಪೆನಿಗೆ ಸೇರಿದ ಬೀಟಿಕಾಡುವಿನ ಕಾಫಿ ತೋಟದ ಕಾಫಿ ಪಲ್ಪಿಂಗ್ ಕಣದಲ್ಲಿ ಕಳೆದ ಒಂದು ತಿಂಗಳಿನಿAದ ರಾತ್ರಿ ಕಾವಲುಗಾರನಾಗಿ ಸಂದೀಪ್ ಕೆಲಸ ಮಾಡಿಕೊಂಡಿದ್ದನು. ತಾ. ೨೫ ರಂದು ರಾತ್ರಿ ಕಣದಲ್ಲಿ ಕಾವಲು ಕೂತು ತಡ ರಾತ್ರಿ ಸಂದೀಪ್ ಹಾಗೂ ರಾಜು ಕಣದಲ್ಲೇ ಮಲಗಿ ನಿದ್ರಿಸಿದ್ದರು. ನಡು ರಾತ್ರ‍್ರಿ ಅಂದಾಜು ೨.೩೦ ರ ಸಮಯಕ್ಕೆ ಒಂಟಿ ಸಲಗವೊಂದು ಕಾಫಿ ತೋಟದಿಂದ ನುಸುಳಿ ಹಠಾತ್ತನೆ ಕಾಫಿ ಕಣಕ್ಕೆ ಬಂದಿದೆ ಎನ್ನಲಾಗಿದೆ. ಕಣದಲ್ಲಿ ಕಂಬಳಿ ಹೊದಿಕೆಯನ್ನು ಹಾಕಿಕೊಂಡು ನಿದ್ರಿಸುತ್ತಿದ್ದ ಇಬ್ಬರ ಪೈಕಿ ಒಂಟಿ ಸಲಗವು ಸಂದೀಪ್‌ನ ತಲೆ ಭಾಗಕ್ಕೆ ಕಾಲಿನಿಂದ ತುಳಿದ ಪರಿಣಾಮ ತಲೆ ಛಿದ್ರವಾಗಿದೆ.
ಗಂಭೀರ ಗಾಯಗೊಂಡ ಸಂದೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಸಲಗವು ಘೀಳಿಡುವ ಶಬ್ದವನ್ನು ಕೇಳಿದ ಕಾವಲುಗಾರ ರಾಜು ನಿದ್ರೆಯ ಮಂಪರಿನಲ್ಲೇ ಎದ್ದುಬಿದ್ದು ಓಡಿಹೋಗಿ ಕಾಫಿ ಪಲ್ಪಿಂಗ್‌ನ ಯಂತ್ರದ ಬಳಿ ಅವಿತುಕೊಂಡು ಕಿರುಚಾಡಿದನು. ಅಷ್ಟರಲ್ಲೇ ಒಂಟಿಸಲಗವು ಅಲ್ಲಿಂದ ಕಾಲ್ಕಿತ್ತಿತ್ತು. ರಾಜುವಿನ ಕೂಗಾಟ ಕೇಳಿ ಕಣದ ಸುತ್ತಮುತ್ತಲಿನಲ್ಲಿರುವ ತೋಟದ ಲೈನ್‌ಮನೆಯ ನಿವಾಸಿಗಳು (ಮೊದಲ ಪುಟದಿಂದ) ತಡರಾತ್ರಿಯೇ ಸ್ಥಳಕ್ಕೆ ಆಗಮಿಸಿದರು.
ಈ ಸಂದರ್ಭ ಮೃತ ಸಂದೀಪ್‌ನನ್ನು ಕಂಡು ಕಣ್ಣೀರಿಟ್ಟರು. ಬೆಳಗ್ಗಿನ ಜಾವದವರೆಗೂ ಮೃತದೇಹದ ಬಳಿಯೇ ಕುಳಿತು ಕೊಂಡರು. ಮೃತಪಟ್ಟ ಸಂದೀಪ್ ವೀರಾಜಪೇಟೆಯ ಧನು ಸೆಕ್ಯೂರಿಟಿ ಖಾಸಗಿ ಸಂಸ್ಥೆಯ ಮೂಲಕ ಕಾಫಿ ಕಣದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಕೊಂಡಿದ್ದನು.
ಮುಗಿಲು ಮುಟ್ಟಿದ ಆಕ್ರಂದನ: ಮೃತ ಸಂದೀಪ್‌ನ ತಂದೆ ಏಳುಮಲೈ ಹಾಗೂ ತಾಯಿ, ಆನಂದಪುರದ ಅಂಚಿಬೆಟ್ಟ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿ ಕೊಂಡಿದ್ದಾರೆ. ಇವರ ಮೂವರು ಮಕ್ಕಳ ಪೈಕಿ ಸಂದೀಪ್ ಎರಡನೇ ಪುತ್ರನಾಗಿದ್ದಾನೆ. ಸಂದೀಪ್ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುವ ವಿಚಾರವನ್ನು ತಿಳಿದು ಸ್ಥಳಕ್ಕೆ ಬಂದ ಪೋಷಕರು ಮೃತ ದೇಹವನ್ನು ನೋಡಿ ಕಣ್ಣೀರಿಟ್ಟರು. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ತನ್ನ ಮಗನ ಮೃತ ದೇಹದ ಬಳಿ ರೋಧಿಸುತ್ತಿರುವ ದೃಶ್ಯ ಕರುಳು ಹಿಂಡುತ್ತಿತ್ತು.
ಪರಿಹಾರ ನೀಡಲು ಪ್ರತಿಭಟನೆ: ಕಾವಲುಗಾರ ಕಾರ್ಮಿಕ ಸಂದೀಪ್ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ ಬಿಬಿಟಿಸಿ ಕಂಪೆನಿಯವರು ರೂ. ೧೦ ಲಕ್ಷ ಪರಿಹಾರ ನೀಡಬೇಕೆಂದು ಕಾರ್ಮಿಕ ಸಂಘಟನೆ ಮುಖಂಡ ಮಹದೇವ್ ಹಾಗೂ ರಮೇಶ್ ಅವರ ನೇತೃತ್ವದಲ್ಲಿ ಬೀಟಿಕಾಡು ಕಾಫಿ ತೋಟದ ಕಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕು.
ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ಸೂಕ್ತ ರಕ್ಷಣೆಯನ್ನು ಸಂಸ್ಥೆಯು ಒದಗಿಸಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅಲ್ಲದೇ ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡು ಶಾಶ್ವತ ಅಂಗವೈಫಲ್ಯದಿAದ ಬಳಲುತ್ತಿರುವ ಕಾರ್ಮಿಕರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಬಿಬಿಟಿಸಿ ಸಂಸ್ಥೆಯ ಪ್ರಮುಖರು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡಬೇಕೆಂದು ಕಾರ್ಮಿಕರು ಪಟ್ಟು ಹಿಡಿದರು. ತದನಂತರ ಸಂಸ್ಥೆಯ ವತಿಯಿಂದ ಮೃತ ಸಂದೀಪ್‌ನ ಕುಟುಂಬಕ್ಕೆ ರೂ. ೨ ಲಕ್ಷ ಪರಿಹಾರ ನೀಡುವುದಾಗಿ ಸಂಸ್ಥೆಯ ಪ್ರಮುಖರು ತಿಳಿಸಿದರು.
ಇದಲ್ಲದೇ ಧನು ಸೆಕ್ಯೂರಿಟಿ ಸಂಸ್ಥೆಯ ವತಿಯಿಂದ ರೂ. ೧ ಲಕ್ಷವನ್ನು ನೀಡುವುದಾಗಿ ಭರವಸೆ ನೀಡಲಾಗಿದೆ. ಒಂಟಿ ಸಲಗದ ದಾಳಿಗೆ ಸಿಲುಕಿ ಮೃತಪಟ್ಟ ಸಂದೀಪ್‌ನ ಮೃತ ದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಸಂದೀಪ್‌ನ ತಂದೆಯ ಸ್ವಂತ ಊರು ತಮಿಳುನಾಡಿನ ವಂದವಾಟಿ ಮಲೆಯೂರು ಗ್ರಾಮಕ್ಕೆ ಆ್ಯಂಬುಲೆನ್ಸ್ ಮುಖಾಂತರ ಕೊಂಡೊಯ್ಯ ಲಾಯಿತು.
ಅರಣ್ಯ ಇಲಾಖೆಯಿಂದ ಪರಿಹಾರ: ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಸಂದೀಪ್ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ತುರ್ತು ಪರಿಹಾರವಾಗಿ ರೂ. ೨ ಲಕ್ಷದ
ಚೆಕ್‌ನ್ನು ಸಂದೀಪ್ ಕುಟುಂಬಕ್ಕೆ ನೀಡಲಾಯಿತು. ವೀರಾಜಪೇಟೆ ತಾಲೂಕು ಡಿ.ಸಿ.ಎಫ್ ಚಕ್ರಪಾಣಿ, ಎ,ಸಿ.ಎಫ್ ರೋಶಿನಿ ವಲಯ ಅರಣ್ಯ ಅಧಿಕಾರಿ ಕಳ್ಳೀರ ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಇದಲ್ಲದೇ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡರು.
ಈ ಸಂದರ್ಭ ಕಾವೇರಿ ತಮಿಳು ಸಂಘದ ಜಿಲ್ಲಾಧ್ಯಕ್ಷ ತಿರುಮಳ್ ರಾಜ್, ತಮಿಳು ಯುವ ಘಟಕದ ಕಾರ್ಯದರ್ಶಿ ಮೋಹನ್ ರಾಜ್ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ತೀತಮಾಡ ರೀನಾ ತುಳಸಿ ಹಾಗೂ ಗ್ರಾ.ಪಂ ಸದಸ್ಯರುಗಳು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ವೀಣಾ ಅಚ್ಚಯ್ಯ ಭೇಟಿ: ಕಾಡಾನೆ ದಾಳಿಗೆ ಸಿಲುಕಿ ಯುವಕ ಮೃತಪಟ್ಟ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಭೇಟಿ ನೀಡಿ ಸಂದೀಪ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ ಸಿದ್ದಾಪುರ ಬಳಿಯ ಬೀಟಿಕಾಡು ಕಾಫಿ ತೋಟ ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಮಿತಿಮೀರಿದ ಕಾಡಾನೆ ಹಾವಳಿಯಿದ್ದು, ಈ ಹಿನ್ನೆಲೆಯಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಭಾಗದ ಕಾಫಿ ತೋಟಗಳಲ್ಲಿ ೪೦ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟಿದ್ದು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಒತ್ತಾಯಿಸಿದ್ದರು. ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಲು ಸದನದಲ್ಲಿ ಪ್ರಸ್ತಾಪಿಸಲಾಗುವುದೆಂದು ತಿಳಿಸಿದರು. ಈ ಸಂದರ್ಭ ಕಾಂಗ್ರೆಸ್ ಪಕ್ಷದ ಮುಖಂಡರಾದ ತೀತಿರ ಧರ್ಮಜ ಉತ್ತಪ್ಪ, ಅಂಕಿತ್ ಪೊನ್ನಣ್ಣ, ಗಣಪತಿ, ನವೀನ್, ಕುಸುಮಾ ಜೋಯಪ್ಪ, ಎ.ಜೆ ಬಾಬು ಇನ್ನಿತರರು ಹಾಜರಿದ್ದರು.