ಚನ್ನಪಟ್ಟಣದ ಆಟಿಕೆಗಳನ್ನು ಜಾಗತಿಕ

ಮಟ್ಟದಲ್ಲಿ ಪರಿಚಯಿಸಬೇಕು : ಪ್ರಧಾನಿ

ನವದೆಹಲಿ, ಫೆ. ೨೭: ಆಟಿಕೆಗಳ ತಯಾರಿಯಲ್ಲಿ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಪ್ರಖ್ಯಾತ. ಶನಿವಾರ ದೆಹಲಿಯಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಆಟಿಕೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಚನ್ನಪಟ್ಟಣದ ಆಟಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಚನ್ನಪಟ್ಟಣದ ಆಟಿಕೆ ಕ್ಲಸ್ಟರ್ ನಮ್ಮ ದೇಶಕ್ಕೆ ಮಾತ್ರ ಸೀಮಿತಗೊಳ್ಳಬಾರದು. ಇದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಜಗತ್ತಿನ ಎಲ್ಲಾ ಮಕ್ಕಳ ಮೊಗದಲ್ಲಿ ನಗು ತರಬೇಕು ಎಂದು ಪ್ರಧಾನಿ, ಚನ್ನಪಟ್ಟಣದ ಆಟಿಕೆ ತಯಾರಕರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದರು. ಚನ್ನಪಟ್ಟಣದ ಬೊಂಬೆಯನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಿಗೆ ತರಲು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕು. ಇದಕ್ಕೆ ಬೇಕಾದ ಸಹಕಾರವನ್ನು ಸರ್ಕಾರ ಸಹ ನೀಡುತ್ತದೆ. ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಐಟಿ ವೃತ್ತಿಪರರ ಮೂಲಕ ಚನ್ನಪಟ್ಟಣದ ಬೊಂಬೆ ತಯಾರಕರಿಗೆ ಕಾರ್ಯಾಗಾರ ಏರ್ಪಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಇಮ್ರಾನ್

ನವದೆಹಲಿ, ಫೆ. ೨೭: ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಹಾಗೂ ಪಾಕಿಸ್ತಾನ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಅವರು ಕಾಶ್ಮೀರ ವಿವಾದ ಕುರಿತು ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಇಮ್ರಾನ್ ಖಾನ್ ಅವರು, ಗಡಿಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಉಭಯ ರಾಷ್ಟçಗಳು ಒಪ್ಪಿಗೆ ಸೂಚಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ಮುಂದಿನ ಪ್ರಗತಿಗೆ ಅನುವು ಮಾಡಿಕೊಡುವ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಭಾರತದ ಕೈಯಲ್ಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಲ್ಲೇಖಿಸಿರುವ ಅವರು, ಕಾಶ್ಮೀರಿ ಜನರ ಸ್ವ–ನಿರ್ಣಯದ ಹಕ್ಕು ಮತ್ತು ದೀರ್ಘಾವಧಿಯ ಬೇಡಿಕೆಯನ್ನು ಈಡೇರಿಸಲು ಭಾರತವು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಟ್ವೀಟ್ ಮಾಡಿದ್ದಾರೆ.

ನೀರ್ಗಲ್ಲು ಸ್ಫೋಟ ಪ್ರಕರಣ: ಸಾವಿನ ಸಂಖ್ಯೆ ೭೨ಕ್ಕೆ ಏರಿಕೆ

ನವದೆಹಲಿ, ಫೆ. ೨೭: ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಬಂಡೆ ಸ್ಫೋಟ ಮತ್ತು ಪ್ರವಾಹ ದುರಂತ ಘಟನೆಯಲ್ಲಿ ಮಡಿದವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಂದು ಮತ್ತೆ ತಪೋವನ ಸುರಂಗದಲ್ಲಿ ೨ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ ೭೨ಕ್ಕೆ ಏರಿಕೆಯಾಗಿದೆ. ಹಿಮಬಂಡೆ ಸ್ಫೋಟಗೊಂಡ ಆರಂಭದಲ್ಲಿ ೩೦ ಮೃತದೇಹಗಳನ್ನು ಪತ್ತೆಹಚ್ಚಲಾಗಿತ್ತು. ನಂತರ ೪೦ ಮೃತದೇಹಗಳು ದೊರಕಿದ್ದವು. ಇದೀಗ ಮತ್ತೆ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಚಿಮೋಲಿ ಜಿಲ್ಲೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಜೋಶಿಮತ್ ಪೊಲೀಸ್ ಠಾಣೆಯಲ್ಲಿ ಈವರೆಗೆ ೨೦೫ ಜನರ ನಾಪತ್ತೆಯಾಗಿರುವ ಪ್ರಕರಣಗಳು ದಾಖಲಾಗಿವೆ. ಗುರುತಿಸಲಾಗದ ಮೃತದೇಹಗಳ ಡಿಎನ್‌ಎ ಮಾದರಿಗಳನ್ನು ಸಂರಕ್ಷಿಸಲಾಗುತ್ತಿದೆ. ೨೮ ಮಂದಿಯ ಮೃತದೇಹಗಳ ಭಾಗಗಳನ್ನು ಡೆಹ್ರಾಡೂನ್‌ನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಚಮೋಲಿ ಜಿಲ್ಲೆಯಲ್ಲಿ ಧೌಲಿಗಂಗಾ ನದಿಯ ಹಿಮಬಂಡೆ ಸ್ಫೋಟಗೊಂಡ ಪರಿಣಾಮ ಗಂಗಾ ನದಿಯ ಉಪನದಿಗಳಾದ ಧೌಲಿಗಂಗಾ ಮತ್ತು ಅಲಕನಂದ ನೀರು ಉಕ್ಕೇರಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು.

ನ್ಯಾಯಾಲಯ ಆವರಣದಲ್ಲಿ ವಕೀಲನ ಬರ್ಬರ ಹತ್ಯೆ

ವಿಜಯನಗರ, ಫೆ. ೨೭: ಕೌಟುಂಬಿಕ ವಿವಾದದ ಹಿನ್ನೆಲೆ ಹಿರಿಯ ವಕೀಲ ಮತ್ತು ಕಾಂಗ್ರೆಸ್ ಮುಖಂಡ ತರಿಹಳ್ಳಿ ವೆಂಕಟೇಶ್ ಅವರನ್ನು ಶನಿವಾರ ಹೊಸಪೇಟೆಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಕೊಲೆ ಮಾಡಲಾಗಿದೆ. ವೆಂಕಟೇಶ್ ನ್ಯಾಯಾಲಯದ ಆವರಣದಲ್ಲಿದ್ದಾಗ ಆತನ ಸಂಬAಧಿ ಮನೋಜ್, ಮತ್ತಿತರರು ಮಾರಣಾಂತಿಕ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.