ಕೂಡಿಗೆ, ಫೆ. ೨೭: ಕಳೆದ ೨೫ ವರ್ಷಗಳಿಂದಲೂ ಹಾರಂಗಿ ಅಚ್ಚುಕಟ್ಟು ಪ್ರದೇಶ ಕೊಡಗಿನ ಗಡಿ ಭಾಗದವರೆಗೆ ಎರಡನೇ ಬೆಳೆಗೆ ನೀರು ಒದಗಿಸುವ ಯೋಜನೆ ಇದುವರೆಗೂ ಭರವಸೆಯಾಗಿಯೇ ಉಳಿದಿದೆ.

ಹಾರಂಗಿ ಜಲಾಶಯದ ಅಣೆಕಟ್ಟೆ ನಿರ್ಮಾಣವಾಗಿ ೬೦ ವರ್ಷಗಳು ಕಳೆಯುತ್ತಾ ಬಂದಿದೆ. ಅಂದಿನಿAದ ಇಂದಿನವರೆಗೆ ಎರಡು ಬಾರಿ ಮಾತ್ರ. ಕೊಡಗಿನ ಗಡಿಭಾಗ ಶಿರಂಗಾಲದವರೆಗೆ ಎರಡನೇ ಬೆಳೆ ಬೇಸಾಯಕ್ಕೆ ನಾಲೆಯ ಮೂಲಕ ನೀರನ್ನು ಹರಿಸಲಾಗಿದೆ. ಅದರ ನಂತರ ಒಂದಲ್ಲಾ ಒಂದು ನೆಪ ಹೇಳುತ್ತಾ ಈ ಭಾಗದ ರೈತರು ವ್ಯವಸಾಯ ಮಾಡಲು ನೀರು ಹರಿಸುವಲ್ಲಿ ಯಾರೂ ಸಹ ಪ್ರಯತ್ನ ಮಾಡುತ್ತಿಲ್ಲ ಎಂದು ಈ ಭಾಗದ ನೀರು ಬಳಕೆದಾರರ ಸಹಕಾರ ಸಂಘದ ಲಾರೋಪವಾಗಿದೆ.

ಕಾವೇರಿ ನೀರಾವರಿ ನಿಗಮದ ಅಧಿನಿಯಮದಂತೆ ನೀರು ಬಳಕೆದಾರರ ಮಹಾಮಂಡಲ ಮತ್ತು ಆಯಾ ಅಚ್ಚುಕಟ್ಟು ಪ್ರದೇಶದ ಅನುಗುಣವಾಗಿ ನೀರು ಬಳಕೆದಾರರ ಸಹಕಾರ ಸಂಘಗಳು, ಸಹಕಾರ ಸಂಘಗಳ ಕಾಯ್ದೆಯ ಅಡಿಯಲ್ಲಿ ರಚನೆಯಾಗಿವೆ. ಇವುಗಳ ಮೂಲಕ ರಾಜ್ಯಮಟ್ಟದ ಅಧಿಕಾರಿಗಳಿಗೆ ಹಾರಂಗಿ ಅಚ್ಚುಕಟ್ಟು ಪ್ರದೇಶ ಜಮೀನಿಗೆ ಎರಡನೇ ಬೆಳೆಗೆ ನೀರು ಹರಿಸುವಂತೆ ಮನವಿಯನ್ನು ಸಲ್ಲಿಸಿದರೂ ಅಧಿಕಾರಿಗಳಿಂದ ಯಾವುದೇ ಪ್ರಯೋಜನ ಆಗಿರುವುದಿಲ್ಲ.

ಹಾರಂಗಿ ಅಣೆಕಟ್ಟೆಯ ನಿರ್ಮಾಣದ ಸಂದರ್ಭದಲ್ಲಿ ಅಣೆಕಟ್ಟೆಯ ನೀರಿನ ಮಟ್ಟದ ಆಧಾರದ ಮೇಲೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹ ಇದ್ದರೂ ಕೊಡಗಿನ ಗಡಿಭಾಗ ಶಿರಂಗಾಲದವರೆಗೆ ಬೇಸಿಗೆ ಬೆಳೆಯನ್ನು ಬೆಳೆಯಲು ತಿಂಗಳ ೧೫ ದಿನಗಳವರೆಗೆ ನೀರು ಹರಿಸುವ ಯೋಜನೆಯಿದ್ದು, ಇದುವರೆಗೂ ಕಾರ್ಯಗತವಾಗಿಲ್ಲ.

ಹಾರಂಗಿ ಅಣೆಕಟ್ಟೆಯ ನಿರ್ಮಾಣದ ಸಂದರ್ಭದಲ್ಲಿ ಕೊಡಗಿನ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ನೂರಾರು ರೈತರು ತಮ್ಮ ಜಮೀನನ್ನು ಕಳೆದುಕೊಂಡಿರುತ್ತಾರೆ. ಅದೇ ಸಂದರ್ಭದಲ್ಲಿ ಜಿಲ್ಲೆಯ ರೈತರ ಬೇಡಿಕೆಗೆ ಅನುಗುಣವಾಗಿ ಹಾರಂಗಿಯ ಮುಖ್ಯ ನಾಲೆಯ ಮುಂದಿನ ಹಂತವಾದ ಎಡ ದಂಡೆ ನಾಲೆ ಹೋಗುವ ಶಿರಂಗಾಲ ಗಡಿ ಭಾಗದ ಪ್ರದೇಶದಲ್ಲಿ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ನಾಲೆ ಗೇಟ್ ಅನ್ನು ಅಳವಡಿಸಲಾಗಿದೆ. ಆದರೆ ಇದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಆಗಿನ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಸಂಬAಧಿಸಿದ ರಾಜಕೀಯ ನಾಯಕರು ಉತ್ತಮವಾದ ಚಿಂತನೆಯ ಮೂಲಕ ಪುಸ್ತಕದಲ್ಲಿ ಬರವಣಿಗೆ ಮಾಡಿದರೂ, ಯೋಜನೆ ಇಲಾಖೆಯಲ್ಲಿ ಇದ್ದರೂ ಇದುವರೆಗೂ ಕಾರ್ಯಗತವಾಗಿಲ್ಲ ಎಂದು ಹುದುಗೂರು, ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ತೊರೆನೂರು, ಹುಲುಸೆ, ಚಿಕ್ಕನಾಯಕನಹಳ್ಳಿ, ಮದಲಾಪುರ ಸೇರಿದಂತೆ ೪೦ ಗ್ರಾಮಗಳ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಅನೇಕ ಬಾರಿ ಎರಡನೇ ಬೆಳೆ ನೀರನ್ನು ಬೇಸಾಯಕ್ಕೆ ಒದಗಿಸಲು ಮನವಿಯನ್ನು ಸಲ್ಲಿಸಲಾಗಿದೆ. ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಿದ್ದರೂ ಅಧಿಕಾರಿ ವರ್ಗದವರು ಮೇಲ್ಮಟ್ಟದ ಅಧಿಕಾರಿಗಳ ಆದೇಶದಂತೆ ನಡೆಯುವುದರಿಂದ ಇಲ್ಲಿನ ರೈತರ ಸಮಸ್ಯೆಗಳ ಮನವಿಗೆ ಸ್ಪಂದನ ದೂರೆತಿಲ್ಲ.

ವರ್ಷಂಪ್ರತಿ ನೀರು ಒದಗಿಸಲು ಭರವಸೆಯನ್ನು ಹೇಳುತ್ತಾ ಬರುವ ಅಧಿಕಾರಿಗಳು, ರಾಜಕಾರಣಿಗಳು ಈ ಸಾಲಿನಲ್ಲಿ ನಾಲ್ಕು ಬಾರಿ ಅಣೆಕಟ್ಟೆ ಭರ್ತಿಯಾದರೂ ಫೆಬ್ರವರಿ ತಿಂಗಳು ಅಂತ್ಯವಾಗುತ್ತಿದ್ದರೂ ನೀರು ಹರಿಸುವ ಯಾವುದೇ ಸೂಚನೆಯಿಲ್ಲದೆ ಭರವಸೆಯಾಗಿಯೇ ಉಳಿದಿದೆ.

- ಕೆ.ಕೆ. ನಾಗರಾಜಶೆಟ್ಟಿ.