ಮಡಿಕೇರಿ, ಫೆ. ೨೭: ಶ್ರೀಮಂಗಲ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಸಿರುವ ಹುಲಿ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಮುಂದುವರಿಸಿದೆ. ಹಲವು ದಿನಗಳಿಂದ ಇಲಾಖೆ ಭಾರೀ ಪ್ರಯತ್ನದಲ್ಲಿದ್ದರೂ ಜಾನುವಾರು ಹತ್ಯೆ ಮಾಡುತ್ತಿರುವ ವ್ಯಾಘ್ರನನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಇದೀಗ ಹುಲಿಯ ಜಾಡು ಅರಸಲು ಬಂಡಿಪುರದಿAದ ಅರಣ್ಯ ಇಲಾಖೆಯ ಪರಿಣಿತ ಶ್ವಾನವಾಗಿರುವ ‘ರಾಣಾ’ನನ್ನು ಕರೆ ತರಲಾಗಿದೆ. ಇಂದು ರಾಣಾ ಅಲ್ಲಲ್ಲಿ ಹುಲಿಯ ಜಾಡು ಅರಸಿ ಅಲೆದಾಡಿದ್ದು, ಸನಿಹದ ದೇವರ ಕಾಡೊಂದರ ಕುರುಹು ನೀಡಿದೆ ಎಂದು ತಿಳಿದು ಬಂದಿದೆ.

ಈ ನಡುವೆ ಬೆಳ್ಳೂರು ಗ್ರಾಮದಲ್ಲಿ ಬಾಚರಣಿಯಂಡ ರಘು ಅವರಿಗೆ ಸೇರಿದ ಜಾನುವಾರನ್ನು ಹುಲಿ ಹತ್ಯೆ ಮಾಡಿರುವ ಸ್ಥಳದಲ್ಲೇ ಅದರ ಕಳೆಬರಹ ಇನ್ನೂ ಇರಿಸಲಾಗಿದ್ದು, ಹುಲಿ ಈ ಸ್ಥಳಕ್ಕೆ ಮತ್ತೆ ಆಗಮಿಸುವ ಬಗ್ಗೆ ಇಲಾಖೆ ಸಜ್ಜಾಗಿದೆ. ಪ್ರಸ್ತುತ ಮಳೆ ಬಂದು ಕಾಫಿ ತೋಟದಲ್ಲಿ ಮೊಗ್ಗು ಬಿಡಲಾರಂಭಿಸಿರುವ ಹಿನ್ನೆಲೆಯಲ್ಲಿ ಸಾಕಾನೆಗಳ ಸಹಕಾರದೊಂದಿಗೆ ಕೂಂಬಿAಗ್ ಕಾರ್ಯಾಚರಣೆ ನಡೆಸುವುದು ಇಲಾಖೆಗೆ ಕಷ್ಟ ಸಾಧ್ಯವಾಗಿದೆ. ರಘು ಅವರ ಜಾನುವಾರು ಸಾವಿಗೀಡಾಗಿರುವ ಸ್ಥಳದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಜನರ ಜಾನುವಾರು ಹಾಗೂ ಸಾಕು ಪ್ರಾಣಿಗಳನ್ನು ದೂರದ ಕೊಟ್ಟಿಗೆಗಳಲ್ಲಿ ಬಿಡದೆ ಮನೆಗಳ ಸನಿಹದಲ್ಲಿ ಕಟ್ಟಿ ಹಾಕಿಕೊಂಡು ರಾತ್ರಿಯಿಡೀ ಬೆಂಕಿ ಹಾಕಿ ಕಾದು ರಕ್ಷಿಸಿಕೊಳ್ಳುವ ನಿಟ್ಟಿನಲ್ಲೂ ಪ್ರಯತ್ನ ನಡೆಸಲಾಗಿದೆ. ಇದಕ್ಕಾಗಿ ಕಾವಲಿಗೆ ಅಲ್ಲಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇಲಾಖೆಯ ಉನ್ನತಾಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.