ಕೂಡಿಗೆ, ಫೆ. ೨೭: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಯನ್ನು ಸಿದ್ಧಗೊಳಿಸಲು ಚರ್ಚಿಸಲಾಯಿತು. ಈ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ಗ್ರಾಮದ ಪ್ರಗತಿಗೆ ಪೂರಕವಾದ ಕೆಲಸಗಳಿಗೆ ಸಹಕಾರ ನೀಡುವಂತೆ ಹಾಜರಿದ್ದ ಅಧಿಕಾರಿಗಳಿಗೆ ಮನವಿ ಮಾಡಲಾಯಿತು. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರುವ ಬಗ್ಗೆ ಮತ್ತು ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೈಗೊಳ್ಳುವ ಕಾಮಗಾರಿಯ ಬಗ್ಗೆ ಚರ್ಚೆಗಳು ನಡೆದವು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಖೇಶ್ ಸರಕಾರದ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅರುಣಕುಮಾರಿ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.