ಕೂಡಿಗೆ, ಫೆ, ೨೭ : ಗೂಡ್ಸ್ ವಾಹನ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಎದುರು ನಡೆದಿದೆ.
ಮೈಸೂರು ಜಿಲ್ಲೆಯ ದಿಂಡಿಗಾಡು ಗ್ರಾಮದ ಸೋಮಪ್ಪ ಎಂಬವರ ಪುತ್ರ ಪ್ರಸನ್ನ ಕುಮಾರ್ (೩೦) ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ತಾ. ೨೬ ರಾತ್ರಿ ದುರ್ಘಟನೆ ಸಂಭವಿಸಿದ್ದು, ಗೂಡ್ಸ್ ವಾಹನ ಡಿಕ್ಕಿಯಾದ ರಭಸಕ್ಕೆ ಪಾದಚಾರಿ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಗೂಡ್ಸ್ ಚಾಲಕ ವಾಹನದಿಂದ ಇಳಿದು ಗಾಯಾಳುವನ್ನು ನೋಡಿ ಮತ್ತೆ ತೆರಳಿದ್ದಾನೆ. ಗಂಭೀರ ಗಾಯಗೊಂಡಿದ್ದ ಪಾದಚಾರಿ ನರಳಾಡಿ ಚರಂಡಿಗೆ ಉರುಳಿ ಬಿದ್ದು ಸಾವನ್ನಪ್ಪಿದ್ದು, ಘಟನೆಯ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.