ಸಿದ್ದಾಪುರ, ಫೆ. ೨೭ : ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಪಾಲಂಗಾಲ ಸಿದ್ದಾಪುರ ವ್ಯಾಪ್ತಿಯ ಬೀಟಿ ಕಾಡು, ಗುಹ್ಯ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರಣ್ಯಕ್ಕೆ ಅಟ್ಟಿದರು.ವೀರಾಜಪೇಟೆಯ ಪಾಲಂಗಾಲ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಮರಿಯಾನೆಗಳು ಸೇರಿದಂತೆ ೧೨ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಿದರು. ಅಲ್ಲದೆ ಸಿದ್ದಾಪುರದ ಭಾಗದ ಕಾಫಿತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನೂ ಕಾಡಿಗೆ ಅಟ್ಟಲಾಯಿತು. ಕಾಡಾನೆಗಳನ್ನು ಓಡಿಸುವ ಸಂದರ್ಭ ಕಾಡಾನೆಗಳ ಹಿಂಡಿನಿAದ ಬೇರ್ಪಟ್ಟಿರುವ ಮೂರು ಒಂಟಿ ಸಲಗಗಳು ಅರಣ್ಯ ಸಿಬ್ಬಂದಿಗಳನ್ನು ಬೆನ್ನಟ್ಟಿದ ಘಟನೆಯೂ ನಡೆಯಿತೆಂದು ಸಿಬ್ಬಂದಿ ತಿಳಿಸಿದ್ದಾರೆ.
ಕಳೆದೆರಡು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಸೇರಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆದರೆ ಕಾಡಿಗೆ ತೆರಳಿದ ಕಾಡಾನೆಗಳು ಮರಳಿ ರಾತ್ರಿ ಸಮಯದಲ್ಲಿ ಹಿಂತಿರುಗಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದಾಗಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.
ಕಾಡಾನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಹಾಗೂ ಕಾರ್ಮಿಕರು ಒತ್ತಾಯಿಸಿದ್ದಾರೆ. ವೀರಾಜಪೇಟೆಯ ಡಿ.ಸಿ.ಎ.ಫ್ ಚಕ್ರಪಾಣಿ ನೇತೃತ್ವದಲ್ಲಿ ಎ.ಸಿ.ಎಫ್ ರೋಷ್ನಿ ಹಾಗೂ ವೀರಾಜಪೇಟೆ ವಲಯಾರಣ್ಯಾಧಿಕಾರಿ ಕಳ್ಳೀರ ದೇವಯ್ಯ ಉಪವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಹಾಗೂ ಸಿಬ್ಬಂದಿಗಳು ಮತ್ತು ಆರ್. ಆರ್. ಟಿ ತಂಡದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. -ವಾಸು