ಸೋಮವಾರಪೇಟೆ, ಫೆ. ೨೬: ಕರ್ನಾಟಕ ಜಾನಪದ ಪರಿಷತ್‌ನ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಜೇಸೀ ಸಂಸ್ಥೆಯ ಮಾಜೀ ಅಧ್ಯಕ್ಷ ಕೆ.ಎ. ಪ್ರಕಾಶ್ ಆಯ್ಕೆಯಾಗಿದ್ದಾರೆ.
ಸೋಮವಾರಪೇಟೆ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪರಿಷತ್‌ನ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಘಟಕದ ಕಾರ್ಯಾಧ್ಯಕ್ಷರಾಗಿ ಎಸ್.ಎ. ಮುರುಳೀಧರ್, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ್ ಹಾನಗಲ್, ಕಾರ್ಯದರ್ಶಿಯಾಗಿ ಎಂ.ಎ. ರುಬೀನಾ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎನ್. ದೀಪಕ್, ಅಶ್ವಿನಿ ಕೃಷ್ಣಕಾಂತ್, ಖಜಾಂಚಿಯಾಗಿ ಶರ್ಮಿಳ ರಮೇಶ್, ಉಪಾಧ್ಯಕ್ಷರಾಗಿ ಸಂಧ್ಯಾ ಕೃಷ್ಣಪ್ಪ, ಬಿ.ಎಂ. ದಾಮೋಧರ್ ಅವರುಗಳನ್ನು ನೇಮಕಗೊಳಿಸಲಾಯಿತು. ಉಳಿದಂತೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಕೆ.ಪಿ. ಸುದರ್ಶನ್, ಕಾರ್ಯದರ್ಶಿಯಾಗಿ ಸುಮತಿ, ಸಾಹಿತ್ಯ ಸಮಿತಿ ಅಧ್ಯಕ್ಷರಾಗಿ ನ.ಲ. ವಿಜಯ, ಕಾರ್ಯದರ್ಶಿಯಾಗಿ ರಾಣಿ ರವೀಂದ್ರ, ಸೇರಿದಂತೆ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಕೊಡಗಿನಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವದರೊಂದಿಗೆ ಎಲೆಮರೆಯ ಕಾಯಿಗಳಂತಿರುವ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪರಿಷತ್ ಕಾರ್ಯನಿರ್ವಹಿಸುತ್ತಿದೆ ಎಂದರು. ಅಳಿವಿನಂಚಿನಲ್ಲಿರುವ ಕಲೆಗಳನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಧ್ಯಂತ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಜಾನಪದ ಕಲಾವಿದರ ಸಮಗ್ರ ಮಾಹಿತಿ ಕೋಶ ಹೊರತರುವ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಖಜಾಂಚಿ ಸಂಪತ್ ಅವರುಗಳು ಉಪಸ್ಥಿತರಿದ್ದರು.