ಮಡಿಕೇರಿ, ಫೆ. ೨೬: ಕೊಡವಾಮೆರ ಕೊಂಡಾಟ ಸಂಘಟನೆಯ ನೇತೃತ್ವದಲ್ಲಿ ಒಂದೇ ವೇದಿಕೆಯಲ್ಲಿ, ಒಂದೇ ದಿನ ೧೯ ಪುಸ್ತಕ ಬಿಡುಗಡೆ ಮಾಡುವ ಮೂಲಕ ಕೊಡವ ಸಾಹಿತ್ಯ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿ ಒಂದು ವರ್ಷ ತುಂಬಿದ ನೆನಪಿಗೆ ಸಂಘಟನೆಯ ಸದಸ್ಯರಿಗೆ ಅಂತಾರ್ಜಾಲದಲ್ಲಿ ಅವ್ವಪಾಜೆ ಎಂಬ ವಿಚಾರವಾಗಿ ಚುಟುಕು ಸ್ಪರ್ಧೆ ನಡೆಯಿತು.
ಬೆಂಗಳೂರು ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕೊಡವ ಸಾಹಿತ್ಯ ಇತಿಹಾಸದಲ್ಲೇ ಮೊದಲು ಒಂದೇ ವೇದಿಕೆಯಲ್ಲಿ ೧೯ ಲೇಖಕರ ೧೯ ವಿಷಯಾಧಾರಿತ ೧೯ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿತ್ತು. ಇದರ ಸವಿ ನೆನಪಿಗಾಗಿ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ, ಸದಸ್ಯ ಅಂಜಪರವAಡ ರಂಜು ಮುತ್ತಪ್ಪ ನಗದು ಬಹುಮಾನ ಪ್ರಾಯೋಜಿಸಿದರೆ, ಕಾರ್ಯಕಾರಿ ಮಂಡಳಿ ಸದಸ್ಯ ಚಿರಿಯಪಂಡ ವಿಶು ಕಾಳಪ್ಪ ಅವರು ಸ್ಪರ್ಧಾ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷೆ ಮೂವೆರ ರೇಖಾಪ್ರಕಾಶ್, ಖಜಾಂಚಿ ಸಣ್ಣುವಂಡ ಕಿಸು ದೇವಯ್ಯ, ಕಾರ್ಯಕಾರಿ ಮಂಡಳಿ ಸದಸ್ಯ ಮಾಳೇಟಿರ ಅಜಿತ್ ಪೂವಣ್ಣ ಅವರು ತೀರ್ಪುಗಾರಿಕೆ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅಮ್ಮಾಟಂಡ ಚೇತನ್ ಅಪ್ಪಯ್ಯ, ದ್ವಿತೀಯ ಸ್ಥಾನವನ್ನು ಬೊಳ್ಳೆರ ಸುಮನ್ ಸೀತಮ್ಮ, ತೃತೀಯ ಸ್ಥಾನವನ್ನು ಆಪಾಡಂಡ ಜಗ ಮೊಣ್ಣಪ್ಪ, ಕೋಟೆರ ಉದಯ್ ಪೂಣಚ್ಚ, ಮಾಚಪಂಡ ತುಳಸಿ ಕುಶಾಲಪ್ಪ ಅವರು ಪಡೆದುಕೊಂಡರು.