ಕೂಡಿಗೆ, ಫೆ. ೨೭: ಸರಕಾರವು ವಸತಿ ರಹಿತರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಅರ್ಹ ಫಲಾನುಭವಿಗಳ ಆಯ್ಕೆಯನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯ್ಕೆ ಮಾಡಿ ಜಾಗವನ್ನು ಹೊಂದಿದ ಅರ್ಹ ಫಲಾನುಭವಿಗೆ ಮನೆ ಕಟ್ಟಿಕೊಳ್ಳಲು ಆದೇಶ ಗ್ರಾಮ ಪಂಚಾಯಿತಿ ಮೂಲಕ ನೀಡಿ ತಳ ಮಟ್ಟದ ಕೆಲಸ ಮತ್ತು ಕೆಲವು ಮಂದಿ ಒಂದು ಭಾಗದ ಗೋಡೆಗಳ ನಿರ್ಮಾಣ ಕಾರ್ಯ ಮಾಡಿದ್ದಾರೆ. ನಾಲ್ಕು ವರ್ಷಗಳು ಕಳೆದರೂ ಯೋಜನೆಗೆ ಹಣ ಬರದೆ ಮನೆ ಕೆಲಸ ಅರ್ಧಕ್ಕೆ ನಿಂತಿದೆ.

ಹೆಬ್ಬಾಲೆ, ಶಿರಂಗಾಲ, ತೊರೆನೂರು, ಕೂಡಿಗೆ ಸೇರಿದಂತೆ ತಾಲೂಕಿನ ಅನೇಕ ಫಲಾನುಭವಿಗಳು ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆಯನ್ನು ನಡೆಸುವುದಾಗಿ ತಿಳಿಸಿದ್ದಾರೆ. ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಸರಕಾರದಿಂದ ಮಂಜೂರಾದ ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ ಅಲ್ಲದೆ ವಸತಿ ನಿರ್ಮಾಣದ ವಿವಿಧ ಯೋಜನೆಗಳಲ್ಲಿ ಆಯಾ ವರ್ಗಕ್ಕೆ ಅನುಗುಣವಾಗಿ ಮನೆಗಳನ್ನು ಮಂಜೂರು ಮಾಡಲಾಗಿತ್ತು.

ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೩೦ ಮನೆಗಳ ನಿರ್ಮಾಣಕ್ಕೆ ಆಯ್ಕೆಗೊಂಡ ಫಲಾನುಭವಿಗಳಿಗೆ ಮನೆಯ ನಿರ್ಮಾಣದ ಆದೇಶ ಪತ್ರವನ್ನು ನೀಡಲಾಗಿ ಮನೆ ಕಟ್ಟಲು ಅವಕಾಶ ದೊರಕಿತು. ಈ ಕಾರಣ ಮನೆ ನಿರ್ಮಾಣಕ್ಕೆ ತೊಡಗಿದರೆ ಮನೆ ನಿರ್ಮಾಣದ ಬಿಲ್ ಮಾತ್ರ ಆರು ವರ್ಷಗಳ ಕಳೆದರೂ ಸಹ ಬಂದಿರುವುದಿಲ್ಲ. ಇದಕ್ಕಾಗಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಗೆ ತಿರುಗಾಡಿ ಸಾಕಾಗಿದೆ. ಇತ್ತ ಮನೆಯೂ ಇಲ್ಲದೆ ಬೇರೆಯವರ ಜಾಗದಲ್ಲಿ ಗುಡಿಸಲಿನಲ್ಲಿ ವಾಸವಿದ್ದರೂ ಸಹ ಅಧಿಕಾರಿಗಳ ಸ್ಪಂದನ ಇಲ್ಲದಾಗಿದೆ. ಇದರಿಂದಾಗಿ ನೊಂದ ನೂರಾರು ಫಲಾನುಭವಿಗಳು ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆಯನ್ನು ನಡೆಸಿ ಹಣಬಿಡುಗಡೆಗೆ ಒತ್ತಾಯಿಸಲಿರುವುದಾಗಿ ಹುಲುಸೆಯ ಸದಾಶಿವ, ಗೌರವ, ವೆಂಕಟೇಶ, ಹಕ್ಕೆ ಗ್ರಾಮದ ಗಿರಿಜ, ಹೆಬ್ಬಾಲೆಯ ಕುಮಾರ, ಮಂಜಪ್ಪ ಸೇರಿದಂತೆ ಶಿರಂಗಾಲದ ಗಣೇಶ್, ಮಂಜುನಾಥ ಸೇರಿದಂತೆ ಹಣಬಾರದ ಈ ವ್ಯಾಪ್ತಿಯ ಗ್ರಾಮಗಳ ಫಲಾನುಭವಿಗಳು ತಿಳಿಸಿದ್ದಾರೆ.

ಅರ್ಧ ಭಾಗದ ಮನೆ ನಿರ್ಮಾಣದ ಕಾಮಗಾರಿಯು ಆಗಿದ್ದರೂ ಸರಕಾರ ಮತ್ತು ಅಧಿಕಾರಿಗಳು ಇದರ ಬಗ್ಗೆ ಏನೂ ಮಾತನಾಡುತ್ತಿಲ್ಲ. ಸಂಬAಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚು ಗಮನ ಹರಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.

-ಕೆ.ಕೆ. ನಾಗರಾಜಶೆಟಿ