ಸಿದ್ದಾಪುರ, ಫೆ. ೨೭: ಸಿದ್ದಾಪುರ ಗ್ರಾ.ಪಂ. ನೂತನ ಅಧ್ಯಕ್ಷರಾದ ರೀನಾ ತುಳಸಿ ಹಾಗೂ ಆಡಳಿತ ಮಂಡಳಿಯು ಗ್ರಾ.ಪಂ. ವ್ಯಾಪ್ತಿಯ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಪಡಿಸಲು ಮುಂದಾಗಿದೆ. ಸಿದ್ದಾಪುರ ಬಸ್ ನಿಲ್ದಾಣದ ಹೃದಯ ಭಾಗದಲ್ಲಿದ್ದ ಮಾಜಿ ಸಂಸದೆ ಪ್ರೇಮಾ ಕಾರ್ಯಪ್ಪರವರ ಅನುದಾನದಿಂದ ನಿರ್ಮಿಸಿದ ಹಳೇ ಬಸ್ಸು ತಂಗುದಾಣವು ತುಕ್ಕು ಹಿಡಿದಿತ್ತು. ಅಲ್ಲದೇ ಅಶುಚಿತ್ವ ತಾಂಡವವಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯಿತಿಯ ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಹಳೇ ಬಸ್ ತಂಗುದಾಣವನ್ನು ನೆಲಸಮಗೊಳಿಸಲು ತೀರ್ಮಾನಿಸಲಾಯಿತು.

ತೀರ್ಮಾನದಂತೆ ತಾ. ೨೪ ರಂದು ರಾತ್ರಿ ಜೆ.ಸಿ.ಬಿ.ಯ ಮೂಲಕ ಹಳೆಯ ತಂಗುದಾಣವನ್ನು ಬಸ್ ನಿಲ್ದಾಣದ ಬಳಿಯಿಂದ ತೆರವುಗೊಳಿಸಲಾಯಿತು. ಅಲ್ಲದೇ ಅವರ ಬಳಿ ಇದ್ದ ಬಾಡಿಗೆ ಕಾರು ನಿಲ್ದಾಣವನ್ನು ಕೂಡ ಸ್ಥಳಾಂತರಗೊಳಿಸಲಾಯಿತು. ಈ ಜಾಗವನ್ನು ಇದೀಗ ಪಂಚಾಯಿತಿಯು ಸಾರ್ವಜನಿಕರ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. ಇದಲ್ಲದೇ ಪಟ್ಟಣದ ಸುತ್ತಮುತ್ತಲಿನಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ.

ಈ ನಿಟ್ಟಿನಲ್ಲಿ ಪಟ್ಟಣದ ಸುತ್ತಮುತ್ತಲಿನಲ್ಲಿ ವರ್ತಕರು ಕಸ ಹಾಗೂ ತ್ಯಾಜ್ಯಗಳನ್ನು ಹಾಕದಂತೆ ನಿರ್ಬಂಧ ವಿಧಿಸಲಾಗಿದೆ. ಕಸ ಹಾಗೂ ತ್ಯಾಜ್ಯಗಳನ್ನು ಸುರಿಯುವ ಮಂದಿಗೆ ಪಂಚಾಯಿತಿ ದಂಡ ವಿಧಿಸಲು ತೀರ್ಮಾನಿಸಿದೆ. ಪಂಚಾಯಿತಿಯ ವ್ಯಾಪ್ತಿಯಲ್ಲಿ ಇರುವ ಗ್ರಾಮಸ್ಥರು ಬಳಸುವ ಕುಡಿಯುವ ನೀರಿಗೆ ಮೀಟರ್ ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಕಸ ತ್ಯಾಜ್ಯ ವಸ್ತುಗಳನ್ನು ಹಾಕಲು ಪಂಚಾಯಿತಿ ವತಿಯಿಂದ ಬಕೆಟ್‌ಗಳನ್ನು ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಹಳೇ ಪಂಚಾಯಿತಿ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಸಭೆ ಒಮ್ಮತದಿಂದ ನಿರ್ಣಯ ಕೈಗೊಂಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ರಸ್ತೆ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಆಯಾ ವಾರ್ಡ್ನ ಸದಸ್ಯರಿಗೆ ಆ ಭಾಗದಲ್ಲಿ ನಡೆಯುವ ಕಾಮಗಾರಿಗಳ ವಿವರಗಳನ್ನು ಹಾಗೂ ಮಾಹಿತಿ ನೀಡುವಂತೆ ಸದಸ್ಯರುಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದಲ್ಲದೇ ಇನ್ನಿತರ ಹೊಸ ಯೋಜನೆಗಳ ಬಗ್ಗೆ ನೂತನ ಅಧ್ಯಕ್ಷರು ಆಡಳಿತ ಮಂಡಳಿಯವರು ಚರ್ಚಿಸಿದ್ದಾರೆ.