ಮಡಿಕೇರಿ, ಫೆ. ೨೮: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಪ್ರಸ್ತುತದ ಸನ್ನಿವೇಶದಿಂದಾಗಿ ಜನಜೀವನ ದುಸ್ತರವಾದಂತಾಗುತ್ತಿದೆ. ಪೂರ್ಣಗೊಳ್ಳದಿರುವ ಕಾಫಿ ಕುಯಿಲು, ಕರಿಮೆಣಸು ಕುಯಿಲಿನ ಸಮಯ, ಹಲವೆಡೆ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿರುವ ಕಾರಣದಿಂದಾಗಿ ತ್ವರಿತಗತಿಯಲ್ಲಿ ತೋಟಗಳಿಗೆ ನೀರು ಹಾಯಿಸುವ ಅನಿವಾರ್ಯತೆಯಂತಹ ಕೆಲಸ ಕಾರ್ಯಗಳು ಒಂದೆಡೆಯಾಗಿವೆ. ಈ ಜಂಜಾಟದ ನಡುವೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಕಂಡು ಬರುತ್ತಿರುವ ವ್ಯಾಘ್ರನ ಅಟ್ಟಹಾಸದಿಂದಾಗಿ ಬೆಳೆಗಾರರು - ಕಾರ್ಮಿಕರು, ಶಾಲಾ - ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಆತಂಕದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ತೋಟಗಳಲ್ಲಿ ಕೆಲಸ ನಿರ್ವಹಿಸುವುದು ಒತ್ತಟ್ಟಿಗಿರಲಿ ರಸ್ತೆಗಳಲ್ಲಿ ತಿರುಗಾಡುವುದೇ ಭಯದ ನೆರಳಿನಲ್ಲಿ ಎಂಬAತಾಗಿದೆ. ವಿದ್ಯಾರ್ಥಿಗಳನ್ನು ಶಾಲಾ- ಕಾಲೇಜುಗಳಿಗೆ ಕಳುಹಿಸಲು ಪೋಷಕರು ಹೆದರುವಂತಿದ್ದರೆ ಕೆಲಸ ಕಾರ್ಯಗಳಿಗೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಹುಲಿ ಇಬ್ಬರು ಅಮಾಯಕರನ್ನು ಬಲಿ ಪಡೆದಿರುವುದು ಭಾರೀ ಭೀತಿಯ ವಾತಾವರಣವನ್ನು ಈ ವಿಭಾಗದಲ್ಲಿ ಸೃಷ್ಟಿಸಿದೆ. ಈತನಕ ಜಾನುವಾರುಗಳ ಮೇಲೆ ಲಗ್ಗೆಯಿಡುತ್ತಿದ್ದ ಹುಲಿ ಇದೀಗ ಮನುಷ್ಯರ ಮೇಲೂ ದಾಳಿ ನಡೆಸಿದೆ. ಇದರೊಂದಿಗೆ ದಿನಕ್ಕೊಂದರAತೆ ಜಾನುವಾರುಗಳು ಹುಲಿಗೆ ಆಹಾರವಾಗುತ್ತಿವೆ. ಹುಲಿ ಸೆರೆಗೆ ಅರಣ್ಯ ಇಲಾಖೆಯ ತಂಡವೇ ಶ್ರೀಮಂಗಲ, ಟಿ.ಶೆಟ್ಟಿಗೇರಿ, ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದ್ದು ಹರಸಾಹಸ ನಡೆಸುತ್ತಿದೆ. ಆದರೆ ಕಾರ್ಯಾಚರಣೆ ತಂಡಕ್ಕೆ ಹುಲಿರಾಯ ಸಿಕ್ಕಿ ಬೀಳುತ್ತಿಲ್ಲ. ಬದಲಿಗೆ ಸುತ್ತಮುತ್ತಲಿನ ಬೇರೆ ಬೇರೆ ಗ್ರಾಮಗಳಲ್ಲಿ ಜನತೆಗೆ ಅಲ್ಲಲ್ಲಿ ಹುಲಿಯ ದರ್ಶನವಾಗುತ್ತಿದೆ. ಈ ರೀತಿಯ ಸನ್ನಿವೇಶ ಈ ವಿಭಾಗದಲ್ಲಿ ಭಾರೀ ಆತಂಕವನ್ನು ದಿನೇ ದಿನೇ ಸೃಷ್ಟಿಸುತ್ತಿದೆ.
ಜನತೆ ಭಯದ ನೆರಳಿನಲ್ಲೇ ದಿನ ಸಾಗಿಸುವಂತಾಗಿದ್ದು, ಎಲ್ಲರೂ ಬೇಗ ಬೇಗನೆ ಮನೆ ಸೇರಿಕೊಳ್ಳುವಂತಾಗಿದೆ. ಸಣ್ಣ ಶಬ್ದವಾದರು ಎದೆ ಢವ ಢವ ಎನಿಸುವುದು ಸಹಜವಾಗಿದೆ. ಹುತ್ತರಿ ಹಬ್ಬ... ದೀಪಾವಳಿ ಹಬ್ಬದಂತಹ ಸಂಭ್ರಮದ ಸಂದರ್ಭ ಕೂಡ ಹೆಚ್ಚಾಗಿ ಕಂಡು ಬಾರದಂತಹ ಪಟಾಕಿ ಶಬ್ದ, ಬೆಳಕಿನ ಚಿತ್ತಾರ ಇದೀಗ ಸಾಮಾನ್ಯವಾಗಿದೆ. ತಮಟೆ - ಡೋಲುಗಳ ಶಬ್ದಗಳಿಂದಲೂ ಜನತೆ ದಿನ ದೂಡುತ್ತಿದ್ದಾರೆ. ತೋಟಗಳು, ಮನೆಯ ಸುತ್ತಮುತ್ತಲು ಪದೇ ಪದೇ ಟಾರ್ಚ್ ಲೈಟ್‌ಗಳನ್ನು ಬೆಳಗಲಾಗುತ್ತಿದ್ದು, ಕರಾಳತೆಯ ಸನ್ನಿವೇಶ ಮನೆಮಾಡಿದೆ.
ಈ ನಡುವೆ ಹುಲಿ ಸೆರೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಪಟಾಕಿಗಳನ್ನು ಸಿಡಿಸದಂತೆ ಟಾರ್ಚ್ ಲೈಟ್‌ಗಳನ್ನು ಬೆಳಗುವುದು, ಶಬ್ದಗಳನ್ನು ಮಾಡದಿರುವಂತೆ ಜನತೆಯಲ್ಲಿ ಮನವಿ ಮಾಡುತ್ತಿದೆ. ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಇದು ಸದ್ಯದ ಪರಿಸ್ಥಿತಿ ಎದುರಿಸಲು ಅನಿವಾರ್ಯವಾಗಿದೆ. ಆದರೆ ಇದೇ ಸ್ಥಳಗಳಲ್ಲಿ ಶಾಶ್ವತವಾಗಿ ಬದುಕಬೇಕಾದ ಜನತೆಯ ಆತಂಕ ನಿವಾರಣೆ ಅರಣ್ಯ ಇಲಾಖೆಯ ಈ ಮನವಿಯಿಂದ ಸಾಧ್ಯವೇ ಎಂಬದು ಪ್ರಶ್ನೆಯಾಗಿದೆ. ಇಲಾಖಾ ಸಿಬ್ಬಂದಿಗಳಿಗೆ ತಮ್ಮ ಕರ್ತವ್ಯದ ಜವಾಬ್ದಾರಿಯ ಹೊರೆ ಎದುರಾಗಿದ್ದರೆ ಜನರ ಪ್ರಾಣ-ಜಾನುವಾರುಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗೆ ಇದೆ. ಈ ಕ್ಲಿಷ್ಟಕರವಾದ ಪರಿಸ್ಥಿತಿಯಿಂದಾಗಿ ಯಾವುದೂ ನಿರೀಕ್ಷಿಸಿದ ಮಾದರಿಯಲ್ಲಿ ನಡೆಯುವುದು ಈಗಿನ ಸನ್ನಿವೇಶದಲ್ಲಿ ಕಷ್ಟ ಸಾಧ್ಯವೂ ಆಗಿದೆ ಎಂಬದು ಇಲಾಖೆಗೂ ಗೊತ್ತು ಜನತೆಗೂ ಗೊತ್ತು. ಆದರೆ ಮುಂದೇನು ಎಂಬ ಆತಂಕ ದಿನೇ ದಿನೇ ಹೆಚ್ಚಾಗುತ್ತಿದೆ. ಜನರ ಬೇಡಿಕೆ - ಹೋರಾಟಗಳೂ ಇದೀಗ ಆಕ್ರೋಶದ ಸ್ವರೂಪ ಪಡೆಯುತ್ತಿದೆ. ವಿಪರ್ಯಾಸವೆಂದರೆ ಗ್ರಾಮೀಣ ಪ್ರದೇಶದಲ್ಲಿನ ಇಂತಹ ಕ್ಲಿಷ್ಟಕರ ಪರಿಸ್ಥಿತಿಯ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳಾಗಲಿ, ಸರಕಾರವಾಗಲಿ, ಜನಪ್ರತಿನಿಧಿಗಳಾಗಲಿ ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬದು ಸಾರ್ವತ್ರಿಕವಾದ ಅಭಿಪ್ರಾಯವಾಗಿ ಹೊರ ಹೊಮ್ಮುತ್ತಿದೆ. ೨೧ನೆಯ ಶತಮಾನದಲ್ಲಿ ಈ ರೀತಿಯ ದುಸ್ತರದ ಬದುಕು - ಬವಣೆಯನ್ನು ಅರ್ಥೈಸಿಕೊಳ್ಳುವವರು ಯಾರು.. ಇದಕ್ಕೆ ಶಾಶ್ವತವಾದ ಪರಿಹಾರವೇನು ಎಂಬುದು ಸದ್ಯಕ್ಕಂತೂ ಯಾರಿಗೂ ಅರಿವಾಗುತ್ತಿಲ್ಲ. ಮುಂದೇನು? -ಶಶಿ ಸೋಮಯ್ಯ