ಬೆಂಗಳೂರು, ಏ. ೨: ಕೋವಿಡ್ ಸೋಂಕು ನಿಯಂತ್ರಣಕ್ಕೆ ಲಸಿಕೆ ಅಭಿಯಾನ ಚುರುಕುಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ರಾಜ್ಯದಲ್ಲಿ ಲಾಕ್ಡೌನ್, ಸೆಮಿ ಲಾಕ್ಡೌನ್, ನೈಟ್ ಕರ್ಫ್ಯೂ ವಿಧಿಸುವುದಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಆರೋಗ್ಯ ಇಲಾಖೆ ಮತ್ತಿತ್ತರ ಇಲಾಖಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ಗಿಂತ ಸೋಂಕು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನ ಜಾಗೃತಿ ಮೂಡಿಸಲಾಗುವುದು ಎಂದರು.
ಕೋವಿಡ್ಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. ೨೦ರಷ್ಟು ಹಾಸಿಗೆ ಮೀಸಲಿಡಲಾಗಿದೆ. ಜಾತ್ರೆಗಳಿಗೆ ನಿರ್ಬಂಧ ಹಾಕಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು. ಲಸಿಕೆ ಹಾಕುವ ಪ್ರಕ್ರಿಯೆಯನ್ನು ಹೆಚ್ಚಿಸಲು ಸೂಚನೆ ನೀಡಿದ್ದೇವೆ. ಸರ್ಕಾರವೇ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುವ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಜನ ಹೆಚ್ಚು ಇರುವ ಕಡೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಾತ್ರೆ, ಉತ್ಸವಗಳನ್ನು ನಿಯಂತ್ರಿಸಿದ್ದೇವೆ. ಶಾಲೆಗಳನ್ನು ಭೌತಿಕವಾಗಿ ನಡೆಸುವುದು ಬೇಡ ಎಂದೂ ನಿರ್ಧರಿಸಲಾಗಿದೆ ಎಂದು ರವಿಕುಮಾರ್ ಸ್ಪಷ್ಟಪಡಿಸಿದರು.
ಸಭೆಯ ನಂತರ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯದ ೮ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ.೫೦ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಜ್ಯಾದ್ಯಂತ ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಗಳನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಸಾರಿಗೆ ಬಸ್ ಗಳಲ್ಲಿ ನಿಗದಿತ ಆಸನದ ಮಿತಿ ಮೀರುವಂತಿಲ್ಲ. ರಾಜ್ಯಾದ್ಯಾಂತ ವಿದ್ಯಾಗಮ ಸ್ಥಗಿತಗೊಳಿಸಲಾಗಿದೆ. ಯಾವುದೇ ರೀತಿಯ, ರ್ಯಾಲಿ, ಮುಷ್ಕರ ನಡೆಸುವಂತಿಲ್ಲ. ಧಾರ್ಮಿಕ ಆಚರಣೆ, ಜಾತ್ರೆ ನಿಷೇಧ ಮಾಡಿದ್ದು, ಏಪ್ರಿಲ್ ೨೦ರ ವರೆಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ.
ಮಾರ್ಗಸೂಚಿ : ರಾಜ್ಯಾದ್ಯಂತ ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಸಂಪೂರ್ಣ ಬಂದ್, ಸಾರಿಗೆ ಬಸ್ಗಳಲ್ಲಿ ನಿಗದಿತ ಆಸನದ ಮಿತಿ ಮೀರುವಂತಿಲ್ಲ. ರಾಜ್ಯಾದ್ಯಂತ ೬ ರಿಂದ ೯ ತರಗತಿಗಳು ಬಂದ್. ೧೦, ೧೧ ಮತ್ತು ೧೨ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುವ
(ಮೊದಲ ಪುಟದಿಂದ) ವಿದ್ಯಾರ್ಥಿಗಳಿಗೆ ತರಗತಿ ಮುಂದುವರೆಯಲಿದೆ. ವೃತ್ತಿಪರ ಕೋರ್ಸ್, ಯೂನಿವರ್ಸಿಟಿ ಪರೀಕ್ಷೆಗಳು ಮತ್ತು ಆರೋಗ್ಯ ವಿಜ್ಞಾನಗಳ ತರಗತಿಗಳನ್ನು ಹೊರತುಪಡಿಸಿ ಇತರ ಎಲ್ಲಾ ತರಗತಿ ಸ್ಥಗಿತಗೊಳಿಸಲಾಗಿದೆ.
ಉನ್ನತ ಮತ್ತು ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ಬೋರ್ಡಿಂಗ್ ಶಾಲೆಗಳು ಮತ್ತು ವಸತಿ ನಿಲಯಗಳನ್ನು ಮುಚ್ಚಬೇಕು. ಪೂಜಾ ಸ್ಥಳಗಳಲ್ಲಿ ವ್ಯಕ್ತಿಗಳಿಗೆ ಮಾತ್ರ ಭೇಟಿ ನೀಡಲು ಮತ್ತು ಪ್ರಾರ್ಥನೆ ಸಲ್ಲಿಸಲು ಅನುಮತಿ ಇದೆ. ಯಾವುದೇ ಕೂಟಗಳು, ಕಾರ್ಯಗಳು ಇತ್ಯಾದಿ ಇರಬಾರದು. ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ, ಜಿಮ್, ಪಾರ್ಟಿ ಹಾಲ್, ಕ್ಲಬ್ ಹೌಸ್, ಈಜುಕೊಳ ಮುಂತಾದ ಸಾಮಾನ್ಯ ಸೌಲಭ್ಯಗಳು ಬಂದ್ ಮಾಡಬೇಕು. ಮನೆಯಿಂದ ಕೆಲಸದ ಅಭ್ಯಾಸವನ್ನು ಸಾಧ್ಯವಾದಷ್ಟು ಕಚೇರಿಗಳು ಮತ್ತು ಕೆಲಸದ ಸ್ಥಳಗಳಲ್ಲಿ ಅನುಸರಿಸಬೇಕು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲ್ಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಚಿತ್ರಮಂದರಿಗಳಲ್ಲಿ ಗರಿಷ್ಠ ೫೦% ಆಸನಕ್ಕೆ ಅನುಮತಿ ನೀಡಲಾಗಿದೆ. ಬೆಂಗಳೂರು, ಮೈಸೂರು, ಕಲ್ಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಹುಬ್ಬಳ್ಳಿ-ಧಾರವಾದ ಸೇರಿದಂತೆ ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಪಬ್ಗಳು, ಬಾರ್ಗಳು, ಕ್ಲಬ್ಗಳು, ರೆಸ್ಟೋರೆಂಟ್ಗಳಲ್ಲಿನ ಗ್ರಾಹಕರ ಸಂಖ್ಯೆ ಶೇ.೫೦ ಮೀರಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.