ಸಿದ್ದಾಪುರ, ಏ. ೧: ಕಳೆದ ಒಂದು ವರ್ಷದ ಹಿಂದೆ ದುಬಾರೆ ಸಾಕಾನೆ ತರಬೇತಿ ಶಿಬಿರದಿಂದ ಚೈನು ಮತ್ತು ಬೇಡಿಯನ್ನು ತುಂಡರಿಸಿ ತಪ್ಪಿಸಿಕೊಂಡು ಹೋಗಿದ್ದ ಕುಶ ಇದೀಗ ಮತ್ತೊಮ್ಮೆ ದುಬಾರೆಯ ಸಾಕಾನೆ ಶಿಬಿರದಲ್ಲಿ ಬಂಧಿಯಾಗಿದ್ದಾನೆ.
ಶಿಬಿರದಿAದ ತಪ್ಪಿಸಿಕೊಂಡು ಪರಾರಿಯಾಗಿದ್ದ ಕುಶ ಇದೀಗ ಸೆರೆಯಾಗಿದ್ದು, ಆತನನ್ನು ‘ಕ್ರಾಲ್’ಗೆ ಹಾಕಿ ಪಳಗಿಸಲಾಗುತ್ತಿದೆ.
ಮೀನುಕೊಲ್ಲಿ ಅರಣ್ಯ ಶಾಖೆಯ ಸಿಬ್ಬಂದಿಗಳ ವಸತಿ ಗೃಹದ ಮೀಸಲು ಅರಣ್ಯದ ಬಳಿ ಕಟ್ಟಿ ಹಾಕಲಾಗಿದ್ದ ಕುಶನನ್ನು ಬುಧವಾರ ರಾತ್ರಿ ದುಬಾರೆ ಸಾಕಾನೆ ಶಿಬಿರಕ್ಕೆ ಸಾಕಾನೆಗಳ ನೆರವಿನಿಂದ ಕರೆ ತಂದು ಶಿಬಿರದಲ್ಲಿ ಪಳಗಿಸುವ ‘ಕ್ರಾಲ್’ಗೆ ಹಾಕಲು ಅರಣ್ಯ ಇಲಾಖಾಧಿಕಾರಿಗಳು ತೀರ್ಮಾನಿಸಿದ್ದರು. ಆದರೆ, ಕುಶ ಶಿಬಿರಕ್ಕೆ ತೆರಳಲು ಕೊಂಚ ಹಿಂದೇಟು ಹಾಕಿದ್ದ ಎನ್ನಲಾಗಿದೆ. ಆದರೆ ಕಾಡಾನೆಗಳನ್ನು ಸೆರೆಹಿಡಿದು ಸಾಕಾನೆಗಳ ಶಿಬಿರಕ್ಕೆ ತರುವಲ್ಲಿ ಅನುಭವವನ್ನು ಹೊಂದಿರುವ ದುಬಾರೆಯ ಸಾಕಾನೆಗಳಾದ ಪ್ರಶಾಂತ್, ಧನಂಜಯ, ಲಕ್ಷö್ಮಣ, ಈಶ್ವರ, ಹರ್ಷ ಸೇರಿ ಕಾರ್ಯಾಚರಣೆಯ ಮೂಲಕ ಕುಶನನ್ನು ಎಳೆದುತಂದು ಗುರುವಾರದಂದು ಸಂಜೆ ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸುವ ಮರದ ಪಂಜರಕ್ಕೆ (ಕ್ರಾಲ್) ಸೇರಿಸಲಾಯಿತು. ಪಂಜರಕ್ಕೆ ತೆರಳಲು ಕುಶ ಹಿಂದೇಟು ಹಾಕಿದರೂ ಕೂಡ ಸಾಕಾನೆಗಳ ಸಹಕಾರದಿಂದ ಕುಶನನ್ನು ಮತ್ತೆ ಶಿಬಿರಕ್ಕೆ ಸೇರಿಸುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಎ.ಸಿ.ಎಫ್. ನೆಹರೂ, ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ಉಪ ವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ, ಕನ್ನಂಡ ರಂಜನ್, ವನ್ಯಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳು, ಮಾವುತರು ಹಾಜರಿದ್ದರು.
-ವಾಸು ಎ.ಎನ್.