ವಿಜು ಸುಬ್ರಮಣಿ
ಪಾಲಿಬೆಟ್ಟ, ಏ. ೧: ಸರಕಾರಗಳ ಯೋಜನೆಗಳನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳದೆ, ಕಾಟಾಚಾರದ ಯೋಜನೆಗಳಿಂದ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡಿದ್ದು ಕೃಷಿ ಫಸಲು ನಾಶ ದೊಂದಿಗೆ ಜಾನು ವಾರುಗಳು ಹಾಗೂ ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದು ರೈತರು, ಬೆಳೆಗಾರರು, ಕಾರ್ಮಿಕರು ಆತಂಕದ ಜೀವನ ನಡೆಸುವಂತಾಗಿದೆ.
ಶಾಶ್ವತ ವೈಜ್ಞಾನಿಕ ಯೋಜನೆಗಳನ್ನು ರೂಪಿಸಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟುವಲ್ಲಿ ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಆರೋಪಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ನಿರಂತರ ಕಾಡು ಪ್ರಾಣಿಗಳ ಹಾವಳಿಯಿಂದ ಹಾಗೂ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅರಣ್ಯಾಭಿವೃದ್ಧಿ ಹಾಗೂ ಕಾಡಾನೆ ಹಾವಳಿ ತಡೆಗೆ ವಿಶೇಷ ಅನುದಾನಗಳನ್ನು ನೀಡಲಾಗುತ್ತಿದ್ದು, ವೈಜ್ಞಾನಿಕವಾಗಿ ಶಾಶ್ವತ ಯೋಜನೆಗಳನ್ನು ರೂಪಿಸದೆ ಕಾಟಾಚಾರಕ್ಕೆ ಆನೆ ಕಂದಕ ಸೋಲಾರ್ ಬೇಲಿ ಅಳವಡಿಸಿ ಕಾಡುಪ್ರಾಣಿಗಳು ನಾಡಿನತ್ತ ಬರುತ್ತಿರುವುದರಿಂದ ಕೃಷಿ ಫಸಲು ನಷ್ಟದೊಂದಿಗೆ ಕಾರ್ಮಿಕರು, ಬೆಳೆಗಾರರು, ಶಾಲಾ ಮಕ್ಕಳು ಆತಂಕದ ಜೀವನ ನಡೆಸುವಂತಾಗಿದೆ.
ಕಾಡುಪ್ರಾಣಿ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟದಿದ್ದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಾಲೂಕು ಪಂಚಾಯತ್ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ ನಿರಂತರ ಕಾಡು ಪ್ರಾಣಿಗಳ ಹಾವಳಿಯಿಂದ ಜಾನುವಾರುಗಳು ಹಾಗೂ ಮನುಷ್ಯರು ಬಲಿಯಾಗುತ್ತಿದ್ದು, ಶಾಶ್ವತವಾಗಿ ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ವೈಜ್ಞಾನಿಕ ಯೋಜನೆಗಳನ್ನು ರೂಪಿಸಬೇಕೆಂದು ಸಂಸದರ ಮೂಲಕ ಶಾಶ್ವತ ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಈ ಸಂದರ್ಭ ಬೆಳೆಗಾರ ಅಂಜನ್ ಚಿನ್ನಪ್ಪ ಉಪಸ್ಥಿತರಿದ್ದರು.