* ೭ ಎಕರೆಯ ಮೈದಾನ * ೧೨ ತಂಡಗಳ ನಡುವೆ ಸೆಣಸಾಟ
ಸಿದ್ದಾಪುರ, ಏ. ೧: ಬಹು ನಿರೀಕ್ಷಿತ ಕ್ರಿಕೆಟ್ ಪಂದ್ಯಾಟವಾದ ಕೊಡಗು ಚಾಂಪಿಯನ್ಸ್ ಲೀಗ್‌ನ ಐದನೇ ಆವೃತ್ತಿಯ ಪಂದ್ಯಾಟ ತಾ. ೩ ರಿಂದ ಆರಂಭವಾಗಲಿದ್ದು, ಪಂದ್ಯಾವಳಿಯ ಸಿದ್ಧತೆ ಭರದಿಂದ ಸಾಗಿದೆ.
ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯ ವಿವಿಧ ಭಾಗದ ಆಟಗಾರರನ್ನು ಒಗ್ಗೂಡಿಸಿ, ಕೊಡಗು ಚಾಂಪಿಯನ್ಸ್ ಲೀಗ್ ಎಂಬ ಐ.ಪಿ.ಎಲ್. ಮಾದರಿಯ ಪಂದ್ಯಾಟವನ್ನು ನಡೆಸಿಕೊಂಡು ಬರುತ್ತಿದ್ದು, ಜಿಲ್ಲೆಯ ಸುಮಾರು ೨೦೦ ರಷ್ಟು ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕೆ.ಸಿ.ಎಲ್. ಪಂದ್ಯಾವಳಿಗೆ ಜಿಲ್ಲೆಯ ವಿವಿಧ ಭಾಗದಿಂದ ೨೦೦ಕ್ಕೂ ಅಧಿಕ ಕ್ರೀಡಾಪಟುಗಳು ಅರ್ಜಿ ಸಲ್ಲಿಸಿದ್ದು, ಐ.ಪಿ.ಎಲ್.ನಂತೆ ಬಿಡ್ಡಿಂಗ್ ನಡೆಯಲಿದೆ.
ಕೆ.ಸಿ.ಎಲ್.ಗೆ ವಿಶೇಷ ಸ್ಥಾನ: ಕೆ.ಸಿ.ಎಲ್. ಪಂದ್ಯಾಟಕ್ಕಾಗಿ ಕರಡಿಗೋಡುವಿನ ೭ ಎಕರೆ ವಿಸ್ತೀರ್ಣದ ಜಾಗದಲ್ಲಿ ಮೈದಾನ ಅಭಿವೃದ್ಧಿಪಡಿಸಲಾಗುತ್ತಿದೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಚಾಂಪಿಯನ್ ತಂಡಕ್ಕೆ ರೂ. ೧.೧೦ ಲಕ್ಷ ನಗದು ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ರೂ. ೫೫ ಸಾವಿರ ನಗದು ದೊರಕಲಿದೆ. ಪ್ರತಿ ಪಂದ್ಯಕ್ಕೂ ಪಂದ್ಯ ಪುರುಷೋತ್ತಮ, ಉತ್ತಮ ಸಿಕ್ಸರ್, ಉತ್ತಮ ಕ್ಯಾಚ್ ಪ್ರಶಸ್ತಿ ಕೂಡ ನೀಡಲಾಗುತ್ತದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಮಾನ್ಯತೆ ಪಡೆದಿರುವ ತೀರ್ಪುಗಾರರು, ಸ್ಕೋರರ್ ಪಂದ್ಯಾವಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಪಂದ್ಯಾಟದ ವಿಶೇಷವಾಗಿದೆ.
ಭಾಗವಹಿಸುವ ತಂಡಗಳು: ಶಮೀರ್, ಇರ್ಷಾದ್ ಮಾಲೀಕತ್ವದ ಕ್ರಿಯೇಟಿವ್ ಕ್ರಿಕೆಟರ್ಸ್ ಮಡಿಕೇರಿ, ನೌಶಾದ್, ಸರಫು ಮಾಲೀಕತ್ವದ ರಾಯಲ್ಸ್ ವೀರಾಜಪೇಟೆ, ಸುದೀಶ್, ಸತ್ತಾರ್ ಮಾಲೀಕತ್ವದ ಟೀಂ ಕೊಂಬನ್ ಸಿದ್ದಾಪುರ, ಥೋಮಸ್, ವಾಸೀಂ ಮಾಲೀಕತ್ವದ ಟೀಂ ಕೂಲ್ ಸಿದ್ದಾಪುರ, ಸಾಬು ವರ್ಗೀಸ್ ಮಾಲೀಕತ್ವದ ರಾಂಬೋ ಕ್ರಿಕೆಟರ್ಸ್ ನೆಲ್ಲಿಹುದಿಕೇರಿ, ಅನ್ಸಾಫ್ ಮಾಲೀಕತ್ವದ ಸ್ಪೋರ್ಟ್ಸ್ ವರ್ಲ್ಡ್ ಮಡಿಕೇರಿ, ಜಂಶೀದ್, ಸಿಮಾಕ್ ಮಾಲೀಕತ್ವದ ಡಾಟ್ ಡೊಮಿನೇಟರ್ಸ್ ದುಬಾರೆ, ಆಶಿಶ್, ಉಬೈದ್ ಮಾಲೀಕತ್ವದ ರೆಡ್ ಬ್ಯಾಕ್ ಸ್ಪೆöÊಡರ್ಸ್ ಮಡಿಕೇರಿ, ರೆಹಮಾನ್, ಮುನೀರ್ ಮಾಲೀಕತ್ವದ ಎಕೆ ಫ್ರೆಂಡ್ಸ್ ಹುಂಡಿ, ಜಂಶೀರ್, ರಹೀಂ ಮಾಲೀಕತ್ವದ ವೈ.ಬಿ.ಸಿ. ನೆಲ್ಲಿಹುದಿಕೇರಿ, ನ್ಯೂ ಕೂರ್ಗ್ ಸ್ಟಾರ್ ನಲ್ವತ್ತೇಕ್ರೆ, ಶುಹೈಬ್, ಆಬಿದ್ ಮಾಲೀಕತ್ವದ ಫ್ರೆಂಡ್ಸ್ ಕ್ರಿಕೆಟರ್ಸ್ ನೆಲ್ಯಹುದಿಕೇರಿ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದೆ.