*ವೀರಾಜಪೇಟೆ, ಜೂ. ೧೮: ಮೃತ ರಾಯ್ ಡಿಸೋಜಾ ಮನೆಗೆ ಇಂದು ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಭೇಟಿ ನೀಡಿದರು. ಭೇಟಿಗೂ ಮುಂಚಿತವಾಗಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಬಳಿಕ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಅವರ ನಿವಾಸ “ನಿರಾಳ” ಕ್ಕೆ ತೆರಳಿ ಪ್ರಧಾನ ಧರ್ಮಗುರು ರೆವರೆಂಡ್ ಫಾದರ್ ಮಧಲೈ ಮುತ್ತು ಅವರೊಂದಿಗೆ ರಾಯ್ ಡಿಸೋಜಾ ಪ್ರಕರಣದ ಬಗ್ಗೆ ಸಮಾಲೋಚನೆ ನಡೆಸಿದರು.

ಆ ಸಂದರ್ಭದಲ್ಲಿ ಫಾದರ್ ಮಧಲೈ ಮುತ್ತುರವರು, ರಾಯ್ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಪೊಲೀಸರು ಹಲವು ಬಗೆಯ ಯತ್ನಗಳನ್ನು ದಿನನಿತ್ಯ ನಡೆಸುತ್ತಲೇ ಇದ್ದಾರೆ. ಇತ್ತೀಚೆಗೆ ರಾಯ್ ಡಿಸೋಜಾ ಸಿಕ್ಕಸಿಕ್ಕವರ ಮೇಲೆ ಹಲ್ಲೆ ಮಾಡಿದ ಎಂದು ವಿಡಿಯೋ ಬಿಡುಗಡೆ ಮಾಡಿದರು; ಹಲ್ಲೆಯನ್ನೇ ಮಾಡಿರಲಿ ಅದಕ್ಕೆ ಒಬ್ಬ ಮಾನಸಿಕ ಅಸ್ವಸ್ಥನನ್ನು ಸಾಯಿಸುವುದು ಉತ್ತರವಲ್ಲ. ಬಂಧಿಸಬಹುದಿತ್ತು. ಮೇಲ್ನೋಟಕ್ಕೆ ನೋಡಿದಾಗ ರಾಯ್ ವಿಚಾರದಲ್ಲಿ ಪೊಲೀಸರು ತಪ್ಪಾಗಿ ನಡೆದುಕೊಂಡಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದರು.

ಈ ಘಟನೆಯಿಂದ ನಮ್ಮ ಸಮುದಾಯಕ್ಕೆ ಏನೇ ಆದರೆ ಯಾರು ಕೇಳುವಂತಿಲ್ಲ ಎನ್ನುವ ಅಭದ್ರತೆ ನಮಗೆ ಸೃಷ್ಟಿಯಾಗಿದೆ ಎಂದರು. ಎ.ಎಸ್. ಪೊನ್ನಣ್ಣ ಮಾತನಾಡುತ್ತಾ; ಈ ಪ್ರಕರಣ ನಡೆದಾಗ ಮೊದಲು ಪೊಲೀಸರನ್ನು ಬಂಧಿಸಿ ಕಸ್ಟೋಡಿಯಲ್ ಇಂಟ್ರಾಗೇಶನ್ ಮಾಡಬೇಕಿತ್ತು. ಅದನ್ನು ಮಾಡದೇ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಎಂಟು ಜನ ಆರೋಪಿಗಳನ್ನು ಸಸ್ಪೆಂಡ್ ಮಾಡಿದ್ದಾರೆ ಅಂದರೆ ಅವರನ್ನು ಆರೋಪಿಗಳಾಗಿ ಪರಿಗಣಿಸಬೇಕು. ಇದೆಲ್ಲಾ ಆದ ಮೇಲೆ ತಾನು ಡಿವೈಎಸ್ಪಿ, ಎಸ್ಪಿ, ಐಜಿ ಜೊತೆ ಮಾತನಾಡಿದ್ದೇನೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಐಜಿ ಅವರು ತಿಳಿಸಿದ್ದಾರೆ ಎಂದರು.

ಬಳಿಕ ಚಿಕ್ಕಪೇಟೆಯಲ್ಲಿರುವ ರಾಯ್ ಡಿಸೋಜಾ ಮನೆಗೆ ತೆರಳಿದ ಪೊನ್ನಣ್ಣ ಹಾಗೂ ಕಾಂಗ್ರೆಸ್ ಮುಖಂಡರುಗಳು, ರಾಯ್ ಡಿಸೋಜಾ ತಾಯಿ ಮೆಟಿಲ್ಡಾ ಲೋಬೋ ಹಾಗೂ ತಮ್ಮ ರಾಬಿನ್ ಡಿಸೋಜಾ, ಇವರುಗಳೊಂದಿಗೆ ಸಾವಿನ ಸಂಪೂರ್ಣ ವಿವರ ಪಡೆದರು. ರಾಬಿನ್ ಡಿಸೋಜಾ ಮಾತನಾಡುತ್ತಾ, ಘಟನೆ ನಡೆದ ಬಳಿಕ ಪೊಲೀಸರು ನಮ್ಮನ್ನು ಬಹಳ ಹೆದರಿಸಿದರು, ನಾವೂ ಎಲ್ಲಿ ಹೋದರೂ ನಮ್ಮ ಹಿಂದೆಯೇ ಬರುತ್ತಿದ್ದರು. ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಭಯಭೀತ ವಾತಾವರಣ ನಿರ್ಮಾಣ ಮಾಡಿ ನಮ್ಮನ್ನು ಇನ್ನಿಲ್ಲದಂತೆ ಕಾಡಿದ್ದರು. ಕೊನೆಗೆ ಕ್ರೆöÊಸ್ತ ಸಮುದಾಯದ ಮುಖಂಡರಿಗೆ ವಿಷಯ ತಲುಪಿದ ಬಳಿಕ ಪೊಲೀಸರು ಸ್ವಲ್ಪ ಸುಮ್ಮನಾದರು. ಶಕ್ತಿ ಪತ್ರಿಕೆಯಲ್ಲಿ ವಿಷಯ ಪ್ರಕಟ ಆಗುವವರೆಗೂ ನಮ್ಮ ಪ್ರಾಣಕ್ಕೂ ಗ್ಯಾರೆಂಟಿ ಇರಲಿಲ್ಲ ಎಂದರು. ಅಲ್ಲದೆ ಈಗ ವೀರಾಜಪೇಟೆ ಪೊಲೀಸರು ನಮಗೆ ಬಹಳ ತೊಂದರೆ ಕೊಡುತ್ತಿದ್ದಾರೆ. ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಮನೆಗೆ ಬಂದು ಸಹೋದರನ ಬಟ್ಟೆ ಕೇಳುವುದು, ಖಾಲಿ ಪತ್ರಕ್ಕೆ ಸಹಿ ಮಾಡಲು ಹೇಳುವುದು, ಪೊಲೀಸರ ಪತ್ನಿಯರು ಬರುವುದು ಮಾಡುತ್ತಿದ್ದಾರೆ. ನಾವೂ ಎಲ್ಲಿ ಹೋಗುತ್ತೇವೆ, ಬರುತ್ತೇವೆ ಎಂಬುದನ್ನು ಕಾಯುತ್ತಿದ್ದಾರೆ. ನಮಗೆ ಭಯವಾಗುತ್ತಿದೆ. ಪೊಲೀಸರ ವಿರುದ್ಧ ನಾವು ಕೇಸ್ ಹಾಕಿರುವುದರಿಂದ ಅವರು ನಮಗೆ ಏನಾದರೂ ಮಾಡುತ್ತಾರೆ ಎನ್ನುವ ಭಯವಾಗುತ್ತಿದೆ ಎಂದು ನೋವು ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ನಿಮ್ಮ ಜೊತೆಗಿದೆ. ನೀವು ಭಯಪಡುವ ಅವಶ್ಯಕತೆಯಿಲ್ಲ. ಸಾಂತ್ವನ ಹೇಳಿದ ಪೊನ್ನಣ್ಣ, ನಿಮಗೆ ನ್ಯಾಯ ಸಿಗುವವರೆಗೆ ನಾವೂ ಜೊತೆಗಿರುತ್ತೇವೆ; ಜೊತೆಗೆ ಬೆಂಗಳೂರಿಗೆ ಹೋದ ಬಳಿಕ ಸಿ.ಐ.ಡಿ ಅಧಿಕಾರಿಗಳೊಂದಿಗೆ ಈ ಪ್ರಕರಣದ ವಿಚಾರವಾಗಿ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿಯ ಟಿ.ಎಂ. ಶಾಹಿದ್, ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ವಕ್ತಾರರಾದ ಸರೀತಾ ಪೂಣಚ್ಚ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಸಿ .ಕೆ ಪ್ರಥ್ವಿನಾಥ್, ಡಿ.ಪಿ. ರಾಜೇಶ್, ಅಗಸ್ಟೀನ್ ಬೆನ್ನಿ, ವಕೀಲ ದ್ರುವಕುಮಾರ್, ಕಾಂಗ್ರೆಸ್ ನಗರಾಧ್ಯಕ್ಷ ಜಿ.ಜಿ ಮೋಹನ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಹಾಗೂ ಕ್ರೆöÊಸ್ತ ಸಮುದಾಯದ ಮುಖಂಡರುಗಳಾದ ಬೇಬಿ ಮ್ಯಾಥ್ಯೂ, ಜಾನ್ಸನ್ ಪಿಂಟೋ, ಕೆ.ಜೆ. ಪೀಟರ್, ಮರ್ವಿನ್ ಲೋಬೋ, ಅಗಸ್ಟಿನ್ ಕ್ಷೇವಿಯರ್ ಕ್ರೆöÊಸ್ತ ಸಮುದಾಯದ ಮುಖಂಡರುಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.