ಮಡಿಕೇರಿ, ಜೂ. ೧೮: ಕೋವಿಡ್ ೩ನೇ ಅಲೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಜ್ಞರು ವರದಿ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮಕ್ಕಳ ಕೋವಿಡ್ ಕೇರ್ ಸೆಂಟರ್ ತೆರೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸಂಭಾವ್ಯ ೩ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ೨೩೭೦ ಮಂದಿ ತುತ್ತಾಗಿದ್ದು, ೧೬ ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಮಕ್ಕಳ ಮರಣ ಪ್ರಕರಣ ವರದಿಯಾಗಿಲ್ಲ. ಆದರೆ, ೩ನೇ ಅಲೆಯ ಬಗ್ಗೆ ಸೂಕ್ತ ಮುಂಜಾಗ್ರತೆ ವಹಿಸಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಬಾರದು. ಇಲಾಖೆಯ ನಾನಾ ಯೋಜನೆಯ ಮೂಲಕ ಇರುವ ಸಹಾಯವಾಣಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಕ್ಕಳ ಸಮಸ್ಯೆಗಳನ್ನು ಪರಿಹರಿಸಬೇಕು. ೧೮ ವರ್ಷ ಒಳಪಟ್ಟ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಮಕ್ಕಳ ಕೋವಿಡ್ ಕೇರ್ ಸೆಂಟರ್ ಆರಂಭಿಸಿ ಕೊರೊನಾ ಸೋಂಕು ದೃಢಪಟ್ಟ ಮಕ್ಕಳನ್ನು ಅಲ್ಲಿಗೆ ತ್ವರಿತವಾಗಿ ದಾಖಲಿಸಬೇಕು. ೧೦ ವರ್ಷದೊಳಗಿನ ಮಕ್ಕಳೊಂದಿಗೆ ಒಬ್ಬರು ಪೋಷಕರು ಕೇಂದ್ರದಲ್ಲಿರ ಬೇಕಾಗಿರುತ್ತದೆ. ಈ ನಿಟ್ಟಿನಲ್ಲಿಯೂ ಕ್ರಮವಹಿಸಬೇಕು. ಕೇಂದ್ರದಲ್ಲಿ ಎಲ್ಲಾ ರೀತಿಯ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು. ಸರಕಾರಿ ವಸತಿ ಶಾಲೆ, ಸರಕಾರೇತರ ಸಂಸ್ಥೆಗಳನ್ನು ಕೇರ್ ಸೆಂಟರ್ ಆಗಿ ಪರಿವರ್ತಿಸಿ. ಮಕ್ಕಳ ರಕ್ಷಣೆಗೆ ಸಮನ್ವ ಯತೆಯಿಂದ ಕೆಲಸ ಮಾಡಬೇಕು ಎಂದರು.

(ಮೊದಲ ಪುಟದಿಂದ)

೩ನೇ ಅಲೆ ಬಗ್ಗೆ ಇಲ್ಲದ ಪೂರ್ವ ತಯಾರಿ - ಸಚಿವೆ ಅಸಮಾಧಾನ

ಕೋವಿಡ್ ೩ನೇ ಅಲೆಯ ಬಗ್ಗೆ ಸಮರ್ಪಕವಾಗಿ ಮಾಹಿತಿ ಇಲ್ಲದ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಎಲ್ಲಾ ಜಿಲ್ಲೆಯಲ್ಲಿಯೂ ೩ನೇ ಅಲೆಯ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ ಆದರೆ, ಕೊಡಗಿನಲ್ಲಿ ಸಮರ್ಪಕ ಮಾಹಿತಿ ಇಲ್ಲ. ನೀಡಿರುವ ವರದಿ ನೋಡಿದರೆ ಬೇಜಾರಾಗುತ್ತೆ. ಬೇರೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ಯೋಜನೆಗಳನ್ನು ಅನುಷ್ಠಾನ ಮಾಡಿ. ಕಾಟಾಚಾರಕ್ಕೆ ಮಾಹಿತಿ ನೀಡಬೇಡಿ. ಸಮನ್ವಯತೆಯಿಂದ ೩ನೇ ಅಲೆ ಎದುರಿಸಿ ಎಂದು ಖಡಕ್ ಸೂಚನೆ ನೀಡಿದರು.

ತಜ್ಞರ ನೇಮಕಕ್ಕೆ ಕ್ರಮವಹಿಸಿ

ಜಿಲ್ಲೆಗೆ ನುರಿತ ಮಕ್ಕಳ ತಜ್ಞರ ನೇಮಕಕ್ಕೆ ಸೂಕ್ತ ಕ್ರಮವಹಿಸಿ, ಖಾಸಗಿ ಆಸ್ಪತ್ರೆಯ ವೈದ್ಯರೊಂದಿಗೆ ಸಭೆ ನಡೆಸಿ ನೇಮಕಾತಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.

ಜಿಲ್ಲಾಸ್ಪತ್ರೆಯ ಡೀನ್ ಡಾ. ಕಾರ್ಯಪ್ಪ ಮಕ್ಕಳಿಗಾಗಿ ಒಂದು ಕೋವಿಡ್ ಕೇರ್ ಸೆಂಟರ್ ಆರಂಭಿಸಿರುವ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ ೫ ಪಿಐಸಿಯು, ೫ ಎಸ್‌ಎನ್‌ಸಿಯು ಹಾಗೂ ೧೦ ಮಕ್ಕಳ ವಿಭಾಗದ ಬೆಡ್‌ಗಳ ಸಾಮರ್ಥ್ಯದ ವಾರ್ಡ್ ಆರಂಭಿಸಲಾಗಿದೆ. ಜೊತೆಗೆ ೨೦ ಪಿಐಸಿಯು, ೧೦ ಎಸ್‌ಎನ್‌ಸಿಯು, ೩೦ ಹೆಚ್.ಡಿ.ಯು ಹಾಗೂ ಮಕ್ಕಳಿಗಾಗಿ ಬೆಡ್‌ಗಳ ಸಾಮರ್ಥ್ಯದ ವಾರ್ಡನ್ನು ಸ್ಥಾಪಿಸಲು ವೈದ್ಯಕೀಯ ಅಧೀಕ್ಷಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಮಾತನಾಡಿ, ಆರೋಗ್ಯ ಕೇಂದ್ರಗಳಲ್ಲಿ ೪, ಜಿಲ್ಲಾಸ್ಪತ್ರೆಯಲ್ಲಿ ೭ ಮಕ್ಕಳ ವೈದ್ಯರು ಲಭ್ಯವಿದ್ದಾರೆ. ಸೋಂಕಿತ ಮಕ್ಕಳಿಗಾಗಿ ಜಿಲ್ಲೆಯಲ್ಲಿ ೩ ಆಸ್ಪತ್ರೆಗಳನ್ನು ಗುರುತಿಸಿದ್ದು ೧೩೮೦ ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೆ ೯ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ೩೦ ಬೆಡ್‌ಗಳನ್ನು ಪ್ರತ್ಯೇಕಿಸಿ ಮಕ್ಕಳ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. ವೀರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ೫, ಬಾಳುಗೋಡು ಮೊರಾರ್ಜಿ ಶಾಲೆಯಲ್ಲಿ ೫, ಮರೂರು ಆಶ್ರಮ ಶಾಲೆಯಲ್ಲಿ ೫, ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ೫, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ೧೦, ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ ೧೦ ಬೆಡ್‌ಗಳನ್ನು ಮಕ್ಕಳ ಚಿಕಿತ್ಸೆಗಾಗಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.

ಪಾಲಕರನ್ನು ಕಳೆದುಕೊಂಡ ಮಕ್ಕಳು

ಜಿಲ್ಲೆಯಲ್ಲಿ ೪೩ ಮಕ್ಕಳು ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ವಿ. ಸುರೇಶ್ ಮಾಹಿತಿ ನೀಡಿದರು.

ಈ ಪೈಕಿ ಅನ್ಯ ಕಾರಣದಿಂದ ಇಬ್ಬರು ಪಾಲಕರು ಮರಣ ಹೊಂದಿರುವ ಪ್ರಕರಣ ೩, ಕೋವಿಡ್‌ನಿಂದ ಇಬ್ಬರು ಪಾಲಕರನ್ನು ಕಳೆದುಕೊಂಡಿರುವ ಪ್ರಕರಣ ೩, ಅನ್ಯ ಕಾರಣದಿಂದ ಏಕಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ ೨, ಕೋವಿಡ್ ಸೋಂಕಿನಿAದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ೩೫ ಪ್ರಕರಣಗಳಿವೆ ಎಂದು ತಿಳಿಸಿದರು.

ಅನಾಥ ಮಕ್ಕಳಿಗೆ ಅವರ ಸಂಬAಧಿಕರನ್ನು ಅರ್ಹ ವ್ಯಕ್ತಿಯೆಂದು ಮಕ್ಕಳ ಕಲ್ಯಾಣ ಸಮಿತಿ ಮೂಲಕ ಗುರುತಿಸಲಾಗಿದೆ. ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ ಎಂದರು.

ಈ ಮಕ್ಕಳ ಪಾಲನೆ - ಪೋಷಣೆಗೆ ಅಗತ್ಯವಾದ ಉದಾರ ಧನ ಸಹಾಯವನ್ನು ಜನತೆ ನೀಡಬಹುದಾಗಿದೆ ಎಂದು ತಿಳಿಸಿದರು. ಅಲ್ಲದೆ, ಅನಾಥ ಮಕ್ಕಳನ್ನು ದತ್ತು ಸ್ವೀಕರಿಸುವವರಿದ್ದರೆ ಅಂತಹವರಿಗೆ ಇಲಾಖೆ ಅವಕಾಶ ಮಾಡಿಕೊಡುತ್ತದೆ ಎಂದು ಮಾಹಿತಿಯಿತ್ತರು.

ಜಿಲ್ಲೆಯಲ್ಲಿ ೦-೧ ವಯೋಮಾನದ ೫೨, ೨ ರಿಂದ ೫ ವಯೋಮಾನದ ೩೩೦, ೬-೧೦ ವಯೋಮಾನದ ೫೫೪, ೧೧-೧೮ ವಯೋಮಾನದ ೧೩೭೪ ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದರು.

ಕಳೆದೆರಡು ವರ್ಷದಲ್ಲಿ ೬೯ ಪೋಕ್ಸೊ ಪ್ರಕರಣ ವರದಿಯಾಗಿದ್ದು, ೩೮ ಮಕ್ಕಳಿಗೆ ಬಾಲನ್ಯಾಯನಿಧಿ ಮೂಲಕ ಸೌಲಭ್ಯ ಒದಗಿಸಲಾಗಿದೆ. ಅಪೌಷ್ಟಿಕತೆಯ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ, ಔಷಧಿ ವಿತರಿಸಲಾಗಿದೆ. ೧೨ ಬಾಲ್ಯವಿವಾಹದ ಪೈಕಿ ೧೧ ವಿವಾಹ ತಡೆದಿದ್ದು, ಒಂದು ವಿವಾಹದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋವಿಡ್ ಕಾರಣದಿಂದ ಮಕ್ಕಳ ಪಾಲನಾ ಸಂಸ್ಥೆಯಿAದ ರಜೆಗೆ ತೆರಳಿದ ೬೫ ಮಕ್ಕಳಿಗೆ ಮಾಸಿಕ ತಲಾ ರೂ.Áಗಿದೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅರುಧಂತಿ ಮಾಹಿತಿ ನೀಡಿದರು.

ಹಣ ಕೊಟ್ರೆನಾ ಬೈಕ್, ಲ್ಯಾಪ್‌ಟಾಪ್...!

ಹಿರಿಯ ನಾಗರಿಕರಿಗೆ ಲಸಿಕೆ ನೀಡಿದ ಬಗ್ಗೆ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಹಿರಿಯ ನಾಗರಿಕರ ಮತ್ತು ವಿಕಲಚೇತನರ ಕಲ್ಯಾಣಾಧಿಕಾರಿ ವಿಮಲ ಹಾಗೂ ಕೇಸ್ ವರ್ಕರ್ ರಾಜ್‌ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಮಧ್ಯೆ ಶಾಸಕ ಅಪ್ಪಚ್ಚು ರಂಜನ್, ಹಣ ನೀಡಿದರೆ ಮಾತ್ರ ವಿಕಲಚೇತನರಿಗೆ ತ್ರಿಚಕ್ರ ಬೈಕ್ ನೀಡುತ್ತಾರೆ ಎಂದು ದೂರಿದರು. ನಿಮ್ಮ ಗ್ರಹಚಾರ ಬಿಡಿಸಬೇಕು ಎಂದು ಕಿಡಿಕಾರಿದರು. ಈ ಸಂದರ್ಭ ಈ ಹಿಂದಿನ ಅಧಿಕಾರಿ ಈ ರೀತಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮವಾಗಿದೆ. ನಾನು ಕರ್ತವ್ಯಕ್ಕೆ ನಿಯೋಜನೆಯಾಗಿ ಒಂದು ತಿಂಗಳಾಗಿದೆೆ ಎಂದು ಅಧಿಕಾರಿ ವಿಮಲ ತಿಳಿಸಿದರು.

ಬಳಿಕ ಸಚಿವೆ ಶಶಿಕಲಾ ಅವರು, ನೈಜ ಫಲಾನುಭವಿಗಳಿಗೆ ಸರಕಾರದ ಯೋಜನೆ ಸಮರ್ಪಕವಾಗಿ ಹಂಚಿಕೆಯಾಗಬೇಕು. ಮುಂದೆ ಸ್ಕೂಟರ್, ಲ್ಯಾಪ್‌ಟಾಪ್ ಹಂಚಿಕೆಯಲ್ಲಿ ಈ ರೀತಿಯ ಸಮಸ್ಯೆ ಆಗಬಾರದು. ಈ ಹಿಂದೆ ಜಿಲ್ಲೆಯಲ್ಲಿ ಲಂಚ ಪಡೆದ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ. ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕೆಂದು ತಿಳಿಸಿದರು.

ಶಾಸಕ ಅಪ್ಪಚ್ಚು ರಂಜನ್ ಅವರು, ಅಂಗನವಾಡಿಗೆ ಆಹಾರ ಪ್ಯಾಕ್ ಮಾಡಿ ಪೂರೈಸುವವರಿಗೆ ಹಣ ಸಂದಾಯವಾಗಿಲ್ಲ ಎಂದರು. ಅಧಿಕಾರಿಗಳು ಉತ್ತರಿಸಿ ಈಗಾಗಲೇ ಹಣ ಪಾವತಿಯಾಗಿದೆ. ಆಗದಿದ್ದಲ್ಲಿ ಕ್ರಮವಹಿಸುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಕ್ತ ವಾಹನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಸಚಿವರು ಈ ಸಂಬAಧ ಮಾತನಾಡಿ, ಅಂಗನವಾಡಿ ದುರಸ್ತಿ ಹಾಗೂ ವಾಹನ ವ್ಯವಸ್ಥೆ ಶೀಘ್ರದಲ್ಲಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಇಲಾಖೆಗೆ ಜಿಲ್ಲಾಡಳಿತ ಪೂರಕ ಬೆಂಬಲ ನೀಡಬೇಕು ಎಂದು ಈ ಸಂದರ್ಭ ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಹಾಜರಿದ್ದರು.